ಇಂಡಿ: ಭಾರತದಂತಹ ಬಹುಭಾಷಿಕ, ಬಹು ಸಂಸ್ಕೃತಿಯ ವಿವಿಧ ಜಾತಿ, ಮತ, ಧರ್ಮಗಳಿರುವ ದೇಶದಲ್ಲಿ ರಾಷ್ಟ್ರಭಕ್ತಿ ಭಾವ ಅತ್ಯವಶ್ಯಕವಾಗಿದ್ದು, ವಸುದೈವ ಕುಟುಂಬಕಂ ಮಂತ್ರವನ್ನು ಮಕ್ಕಳಲ್ಲಿ ಮೂಡಿಸಬೇಕಾಗಿದೆ ಎಂದು ಸ್ಕೌಟ್ಸ್,ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಪರಶುರಾಮ ಕುಂಬಾರ ಹೇಳಿದರು.
ಅವರು ಪಟ್ಟಣದ ಆರ್ ಡಿ ಇ ಸಂಸ್ಥೆಯ ಕ್ರೈಸ್ತ ಕನ್ನಡ ಮಾಧ್ಯಮ ಹಾಗೂ ಏ0ಜಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇಂಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ವತಿಯಿಂದ ಜರುಗಿದ ತಾಲೂಕ ಮಟ್ಟದ ದೇಶಭಕ್ತಿ ಗೀತೆಗಳ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ ಮಾಸ್ಟರ್ ಸಂತೋಷ ಬಂಡೆ ಮಾತನಾಡಿ, ದೇಶಭಕ್ತಿಯ ಸ್ಪರ್ಧಾ ಚಟುವಟಿಕೆಗಳು ದೇಶದ ಅಖಂಡತೆ, ಭವ್ಯ ಸಂಸ್ಕೃತಿ ಪರಂಪರೆಗಳ ಗೌರವವನ್ನು ಎತ್ತಿಹಿಡಿಯುತ್ತವೆ. ಎಲ್ಲರಲ್ಲಿ ದೇಶಭಕ್ತಿ, ತ್ಯಾಗ ಮನೋಭಾವನೆಯು ಜಾಗೃತವಾದಾಗ ದೇಶದ ಏಕತೆ ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಾಗ್ಯಜ್ಯೋತಿ ಕೊಳಾರಿ ಪ್ರಾಸ್ತಾವಿಕವಾಗಿ ಮಾತನಾಡಿ,ದೇಶಭಕ್ತಿಯು ದೇಶದ ಸಮಗ್ರತೆ, ಸೋದರತೆ ಮತ್ತು ಸಮಾನತೆಗೆ ಪ್ರಮುಖ ಪ್ರೇರಣೆಯಾಗುತ್ತದೆ. ಸ್ಕೌಟ್ಸ್, ಗೈಡ್ಸ್ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.
ಆರ್ ಡಿ ಇ ಸಂಸ್ಥೆಯ ಅಧ್ಯಕ್ಷೆ ಡಿ ಶಿರೋಮಣಿ ಅಧ್ಯಕ್ಷತೆ ವಹಿಸಿದ್ದರು.ತಾಲೂಕ ಕಾರ್ಯದರ್ಶಿ ಶಹಾಜಿ ಪಾಟೀಲ, ಖಜಾಂಚಿ ಬಸವರಾಜ ಗೋರನಾಳ,ಮುಖ್ಯ ಶಿಕ್ಷಕ ಮಂಜುನಾಥ ನಾಯ್ಕೋಡಿ, ಸ್ಕೌಟ್ ಮತ್ತು ಗೈಡ್ ಶಿಕ್ಷಕರಾದ ದತ್ತಾತ್ರೇಯ ಕೊಳಾರಿ, ವೈ ಎಂ ಬಾಗೇವಾಡಿ, ಸಂಗಮೇಶ ಬಂಡೆ, ಸವಿತಾ ಥಾಲಬಾವಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ಗಳಾದ ಶಂಕರ ಕೋಳೆಕರ,ಬಿ ವ್ಹಿ ಹಿರೇಮಠ, ಗೈಡ್ ಕ್ಯಾಪ್ಟನ್ ಸರೋಜಿನಿ ಮಾವಿನಮರ ಸ್ಪರ್ಧೆಯ ನಿರ್ಣಾಯಕರಾಗಿದ್ದರು.
ದೇಶಭಕ್ತಿ ಗೀತೆಗಳ ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಹಂತಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ತಾಲೂಕಿನ 120 ಕ್ಕೂ ಅಧಿಕ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.