ರೋಡಗಿಯ ಶಿವಮೂರ್ತಿ ಮಹಾಸ್ವಾಮಿಗಳು ಮತ್ತು ಅನೇಕ ಪೂಜ್ಯರು ನಮ್ಮ ವಿಚಾರಗಳು ಮತ್ತು ಕಲ್ಪನೆಗಳು ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ. ಅವರ ವಿಚಾರಗಳನ್ನು ಇಂದಿನ ಜನರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ತಾಲೂಕಿನ ಸುಕ್ಷೇತ್ರ ರೋಡಗಿ ಗ್ರಾಮದ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಹಿರಿಯ ಶಿವಮೂರ್ತಿ ಮಹಾಸ್ವಾಮಿಗಳ 10 ನೇ ವರ್ಷದ ಪುಣ್ಯಾರಾಧನೆ ಮಹೋತ್ಸವ ಹಾಗೂ ನೂತನ ಯಾತ್ರಿ ನಿವಾಸದ ಕಟ್ಟಡದ ಲೋಕಾರ್ಪಣೆ ಮತ್ತು ನೂತನ ಮಂಗಲ ಕಾರ್ಯಾಲಯದ ಭೂಮಿ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿದರು.
ಮಾನವನ ಆಂತರಿಕ ಪರಿಣಾಮಗಳಲ್ಲಿ ಆಧ್ಯಾತ್ಮಿಕ ಪರಿಣಾಮವೂ ಒಂದಾಗಿದೆ. ಗುರುಮುಖದಿಂದ ಬರುವ ಆಧ್ಯಾತ್ಮಿಕ, ಪಾರಮಾರ್ಥಿಕ ವಾಕ್ಯಗಳನ್ನು ಶ್ರವಣ ಮಾಡುವದರಿಂದ ಅಪರೋಕ್ಷ ಜ್ಞಾನ ಉಂಟಾಗುವದು. ಭಗವಂತನ ನಾಮಸ್ಮರಣೆ, ಗುರುಮುಖದಿಂದ ಬರುವ ಸಚ್ಛಾಸ್ತ್ರ ಪುರಾಣಗಳನ್ನು ಅತ್ಯಂತ ಪರಿಶುದ್ದರಾಗಿ ಶ್ರವಣ ಮಾಡುವುದು, ಅದನ್ನೆ ಮನನ ಮಾಡುತ್ತ ಅಂತರಂಗದಲ್ಲಿ ಮಾಡುವ ನಿಧಿಧ್ಯಾನಸದಿಂದ ಮಾನವರೆಲ್ಲರೂ ಲೌಕಿಕ ಮತ್ತು ಪಾರಲೌಕಿಕ ಲಾಭಗಳನ್ನು ಪಡೆಯಬಹುದಾಗಿದೆ ಎಂದು ಯಶವಂತರಾಯಗೌಡ ಪಾಟೀಲರು ಹೇಳಿದರು.
ಸಾನಿಧ್ಯ ವಹಿಸಿದ ವಿರಕ್ತಿ ಮಠ ರೋಡಗಿಯ ಅಭಿನಯ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ ಪುಣ್ಯಸ್ಮರಣೆ ಗತಿಸಿಹೋದ ಪೂಜ್ಯರ ನೆನಪುಗಳನ್ನು ಮಾಡಿಕೊಡುತ್ತವೆ. ಮನುಷ್ಯನಲ್ಲಿ ಶುದ್ಧ ಮನಸ್ಸು ನಂಬಿಕೆ ಇದ್ದರೆ ಮಾತ್ರ ಪುಣ್ಯ ಪುರುಷರನ್ನು ಕಾಣಲು ಸಾದ್ಯ ವಾಗುತ್ತದೆ. ಆದ್ದರಿಂದ ಪೂಜ್ಯರ ಮೇಲೆ ವಿಶ್ವಾಸ ನಂಬಿಕೆ ಇಡಬೇಕು . ಶಿವಮೂರ್ತಿ ಮಹಾಸ್ವಾಮಿಗಳು ಧರ್ಮ,ಸಂಸ್ಕೃತಿಯ ಪ್ರತಿಪಾದಕರು. ಈ ಭಾಗದಲ್ಲಿ ಆರಾಧ್ಯ ದೈವರಾಗಿ ಅನೇಕ ಜನರ ಕಲ್ಯಾಣ ಮಾಡಿದ್ದಾರೆ ಎಂದರು.
ಖೇಡಗಿಯ ವಿರಕ್ತಮಠದ ಶಿವಬಸವರಾಜೇಂದ್ರ ಮಾಹಾಸ್ವಾಮಿಗಳು ಮಾತನಾಡಿ ಶಿವಮೂರ್ತಿ ಮಹಾಸ್ವಾಮಿಗಳು ಈ ಭಾಗವನ್ನು ಪಾವನಗೊಳಿಸಿದ ಶ್ರೀಗಳು ಇಲ್ಲಿ ಮಂಗಲ ಕಾರ್ಯಾಲಯ ನಿರ್ಮಿಸುತ್ತಿರುವದು ಈ ಜನರ ಸುದೈವ ಎಂದರು.ಬರೂರದ ಆನಂದ ಶಾಸ್ತ್ರಿಗಳು, ಸಂಗಣ್ಣ ಈರಾಬಟ್ಟೆ ಮಾತನಾಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ವೇದಮೂರ್ತಿ ಸೂರಯ್ಯ ಗಚ್ಚಿನಮಠ, ಕೆ.ಆರ್.ಐ.ಡಿ.ಎಲ್ ಎಇಇ ರಾಜೇಶ ಹೂಗಾರ,ರೋಡಗಿಯ ಮಹಾಂತೇಶ ಕಲ್ಲೂರಕರ, ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ ಅಲಗೊಂಡ ವೇದಿಕೆಯ ಮೇಲಿದ್ದರು. ಶಿವಲಿಂಗ ಶಾಬಾದಿ, ಶಿವಮೂರ್ತಿ ಮೂಲಗಿ,ಸತೀಶ ಜವಳಗಿ,ಮಲ್ಲಿಕಾರ್ಜುನ ಶಿರಶ್ಯಾಡ,ಬತ್ತು ಸಾವಕಾರ ಲಾಳಸಂಗಿ ಮತ್ತಿತರಿದ್ದರು.