ಬೆಳಗಾವಿ: ರಾಜ್ಯದಲ್ಲಿ ಜಾರಿಯಾಗಿರುವ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ರದ್ದುಪಡಿಸಿಲ್ಲ. ಈ ನೀತಿಯ ಆಶಯಗಳಿಗೆ ವಿರೋಧ ಇಲ್ಲದಂತೆ ಪ್ರಾದೇಶಿಕ ಸಮತೋಲನ ಕಾಪಾಡುವ, ರಾಜ್ಯ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾದ ರಾಜ್ಯ ಶಿಕ್ಷಣ ನೀತಿ ರೂಪಿಸಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಮಜಾಯಿಷಿ ನೀಡಿದರು.
ವಿಧಾನ ಪರಿಷತ್ನಲ್ಲಿ ಎನ್ಇಪಿ ಕುರಿತ ಸುದೀರ್ಘ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಅವಳಡಿಸಿಕೊಂಡಿರುವ ಪಠ್ಯಕ್ರಮಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಲಾಗಿದೆ. ಈ ಪಠ್ಯಕ್ರಮಗಳನ್ನೇ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಸಮೂಹ ಹಾಗೂ ಮುಂದಿನ ವ್ಯಾಸಂಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದರು.
ಆಮೂಲಾಗ್ರ ಸುಧಾರಣೆ ಅಥವಾ ಬದಲಾವಣೆ ಎನ್ನುವುದು ಶಾಲಾ ಶಿಕ್ಷಣ ವ್ಯವಸ್ಥೆಯಿಂದಲೇ ಆರಂಭಿಸಬೇಕಾಗಿದೆ. ತಳಹದಿ ಗಟ್ಟಿಯಾಗಿದ್ದರೆ ಮಹಡಿ ಸುಭದ್ರವಾಗಿರುತ್ತದೆ. ಆದರೆ ತಳಹದಿಯಾಗಿರುವ ಶಾಲಾ ಶಿಕ್ಷಣ ಬಿಟ್ಟು, ಛಾವಣಿಯಾಗಿರುವ ಉನ್ನತ ಶಿಕ್ಷಣದಲ್ಲಿ ಎನ್ಇಪಿ ಜಾರಿಗೊಳಿಸಿರುವುದು ಎಷ್ಟು ಸರಿ? ಎಂದು ಡಾ.ಎಂ.ಸಿ.ಸುಧಾಕರ್ ಕೇಳಿದರು.
ಹಿಂದಿನ ಶಿಕ್ಷಣ ವ್ಯವಸ್ಥೆಯ ಲೋಪಗಳು, ಗುರಿ ತಲುಪಿದ್ದರ ಬಗ್ಗೆ ಎನ್ಇಪಿಗೆ ರಚಿತ ಸಮಿತಿಯು ಅಧ್ಯಯನ ಮಾಡಿಲ್ಲ. ಬೋಧಕರು, ಬೋಧಕೇತರ ಸಿಬ್ಬಂದಿ, ಮೂಲ ಸವಲತ್ತುಗಳ ಕುರಿತು ಶ್ವೇತಪತ್ರ ಹೊರಡಿಸಬೇಕಾದ ಅವಶ್ಯಕತೆ ಮನಗಂಡಿಲ್ಲ. ಕೌಶಲಾಭಿವೃದ್ಧಿ ತರಬೇತಿಗೆ ಬೇಕಾದ ಸವಲತ್ತು, ನುರಿತ ಸಿಬ್ಬಂದಿ ವ್ಯವಸ್ಥೆ ಬಗ್ಗೆಯೂ ಗಮನಹರಿಸಿಲ್ಲ, ಜಾಗತೀಕರಣ, ಬಹುಪ್ರವೇಶ, ಬಹು ವಿಷಯ ವ್ಯಾಸಂಗ, ವಿದೇಶದಲ್ಲಿ ಉತ್ತಮವಾದ ಶಿಕ್ಷಣ ವ್ಯವಸ್ಥೆಗೆ ಗಮನವೆಂದು ಹೇಳಿದರೆ ಸಾಲುವುದಿಲ್ಲ. ಕಾರ್ಯಸಾಧು, ಪ್ರಯೋಜನ, ಫಲಿತಾಂಶ ಆಧಾರಿತ ಆಲೋಚನಾಕ್ರಮಗಳು ಅಷ್ಟೇ ಮುಖ್ಯವಾಗಿದೆ ಎಂದರು.
ಜಿಎಸ್ಡಿಪಿಯ ಶೇ.6 ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಅನಾಧಾರ ತೋರುತ್ತಿವೆ. ಎನ್ಇಪಿ ಮಹತ್ವವನ್ನು ಸಾರುವ ಕೇಂದ್ರ ಸರ್ಕಾರ ಮೊದಲ ವರ್ಷ ಒಂದು ಲಕ್ಷ ಕೋಟಿ ರೂ. ಕ್ರಮೇಣ ಈ ಅನುದಾನ ಹೆಚ್ಚಿಸುವ ನೀತಿ-ನಿರ್ಧಾರ ಕೈಗೊಂಡಿದ್ದರೆ, ಎನ್ಇಪಿ ವಿಚಾರದಲ್ಲಿ ಬದ್ಧತೆಯಿದೆ ಎಂದು ಒಪ್ಪಿಕೊಳ್ಳಲು ಸಾಧ್ಯವಿತ್ತು ಎಂದು ಡಾ.ಎಂ.ಸಿ.ಸುಧಾಕರ್ ಕುಟುಕಿದರು.
ಅಧ್ಯಯನ ಮಾಡಿಲ್ಲ: ಎನ್ಇಪಿ ಪರವಾಗಿ ದೊಡ್ಡ ಧ್ವನಿ ಎತ್ತಿದವರು, ಒತ್ತಾಯಿಸಿದವರು ಅದರಲ್ಲಿರುವ ಅಂಶಗಳನ್ನು ಪೂರ್ಣವಾಗಿ ಅಧ್ಯಯನ ಮಾಡಿಲ್ಲ. ನೀತಿ ರೂಪಿಸಿದವರು ವಾಸ್ತವಿಕ ಪರಿಸ್ಥಿತಿ ಪರಿಗಣಿಸಿಲ್ಲ. ಪ್ರಾಥಮಿಕ, ಪ್ರೌಢ ಪಠ್ಯಗಳಲ್ಲಿ ತಮಗೆ ಅನುಕೂಲಕರ ವಿಚಾರ ಸೇರ್ಪಡೆ ಮಾಡಿದ್ದು, ಸಂರಚನೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.
ಅತಿಥಿ ಉಪನ್ಯಾಸಕರ ಮೇಲೆ ಉನ್ನತ ಶಿಕ್ಷಣ ಅವಲಂಬಿಸಿದೆ. ಮೂಲಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಬಹುಪ್ರವೇಶ, ಬಹು ವ್ಯಾಸಂಗದ ಬಗ್ಗೆ ಪ್ರಸ್ತಾಪಿಸಿರುವುದು ಅನುಷ್ಠಾನ ಯೋಗ್ಯವಲ್ಲವೆಂದು ಪ್ರತಿಪಾದಿಸಿದರು. ವಸ್ತುಸ್ಥಿತಿ ಮನವರಿಕೆಯಾಗಿದ್ದರಿಂದಲೇ ರಾಜ್ಯ ಶಿಕ್ಷಣ ನೀತಿ ರೂಪಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ತಜ್ಞರ ಸಮಿತಿ ರಚಿಸಲಾಗಿದೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಆಶಯಗಳನ್ನು ಒಳಗೊಂಡು ನೀತಿ ರೂಪಿಸಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.