ಆರೋಪಿತನಾದ ಲಕ್ಕಪ್ಪ ತಂ.ನಿಂಗಪ್ಪ ಪಾಯಕರ, ಸಾ|| ಹಂಜಗಿ ಈತನು ದಿ : 17-04-2020 ರಂದು ಮದ್ಯಾಹ್ನ 02-15 ಗಂಟೆ ಸುಮಾರಿಗೆ ಇಂಡಿ ತಾಲೂಕಿನ ಗುಬ್ಬೇವಾಡ-ಶಿರಗೂರ ರಸ್ತೆಯ ಗುಬ್ಬೇವಾಡದಿಂದ ಅಂದಾಜು 02 ಕಿ.ಮೀ.ಅಂತರದಲ್ಲಿ ಶಿರಗೂರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ 1 ಲೀಟರ್ ಸಾಮರ್ಥ್ಯದ 5 ಕಳ್ಳಭಟ್ಟಿ ಸರಾಯಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಒಟ್ಟು 5 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಕಪ್ಪು ಬಣ್ಣದ ಕೆಂಪು ಮಿಶ್ರಿತ ಹೋಂಡಾ ಶೈನ್ ದ್ವೀ-ಚಕ್ರ ವಾಹನ ನಂ.-ಕೆ.ಎ.- 02/ಎಚ್ಎಕ್ಸ್-8377ನೇದ್ದರ ಮೇಲೆ ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಅಬಕಾರಿ ಉಪ-ನಿರೀಕ್ಷಕರಾದ ಶ್ರೀ ಶರಣಗೌಡ ಎಂ. ಬಿರಾದಾರ ಇವರು ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿತನ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32(1) ಮತ್ತು 38(ಎ)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಸದರಿ ಪ್ರಕರಣವನ್ನು ಶ್ರೀ ರಾಹುಲ ಎಸ್. ನಾಯಕ, ಅಬಕಾರಿ ಉಪ-ನಿರೀಕ್ಷಕರು-1, ಇಂಡಿ ಇವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ಮಾನ್ಯ ಸಿ.ಜೆ. & ಜೆ.ಎಂ.ಎಫ್.ಸಿ.ನ್ಯಾಯಾಲಯ, ಇಂಡಿಯ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಈಶ್ವರ ಎಸ್.ಎಮ್. ಇವರು ಸದರಿ ಪ್ರಕರಣದ ವಾದ ವಿವಾದಗಳನ್ನು ಆಲಿಸಿ ಆರೋಪಿತನಿಗೆ ಕರ್ನಾಟಕ ಅಬಕಾರಿ ಕಾಯ್ದೆ ಕಲಂ : 32(1) ರ ಪ್ರಕಾರ 1 ವರ್ಷ ಕಠಿಣ ಕಾರಾಗೃಹ (ಜೈಲು) ಶಿಕ್ಷೆ ಹಾಗೂ ರೂ.10,000=00 ದಂಡ ವಿಧಿಸಿ ದಂಡ ಭರಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗ್ರಾಹ ಶಿಕ್ಷೆ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಕಲಂ : 38(ಎ) ರ ಪ್ರಕಾರ 1 ವರ್ಷ ಕಠಿಣ ಕಾರಾಗೃಹ (ಜೈಲು) ಶಿಕ್ಷೆ ಹಾಗೂ ರೂ.10,000=00 ದಂಡ ವಿಧಿಸಿದ್ದಾರೆ. ದಂಡ ಭರಿಸದಿದ್ದರೆ ಹೆಚ್ಚವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಭಾ.ದಂ.ಸಂ. ಕಲಂ 273ರ ಅಡಿಯಲ್ಲಿ 3 ತಿಂಗಳ ಸಾದಾ ಕಾರಾಗ್ರಹ ವಾಸ ಹಾಗೂ 500=00 ದಂಡ ವಿಧಿಸಿ, ದಂಡ ಭರಿಸದಿದ್ದರೆ ಹೆಚ್ಚುವರಿಯಾಗಿ 3 ತಿಂಗಳ ಸಾದಾ ಕಾರಾಗ್ರಹ ವಾಸ ವಿಧಿಸಿ ದಿನಾಂಕ : 29-01-2024 ರಂದು ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಇಬ್ರಾಹಿಂ ತಂ.ಖಾದರಸಾಬ ಗಟ್ಟಿಮಹಲ ಇವರು ವಾದ ಮಂಡಿಸಿದ್ದರು. ಸದರಿ ವಿಷಯವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಲು ಈ ಮೂಲಕ ಕೋರಿದೆ.