ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ರಸ್ತೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳ ವಿರುದ್ದ ಅವಾಚ್ಯಶಬ್ದಗಳಿಂದ ನಿಂದಿಸಿ ಬಿತ್ತಿಪತ್ರಗಳನ್ನು ಅಂಟಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಬಿಎಂಪಿಯ ಪಶ್ಚಿಮ ವಲಯದ ವ್ಯಾಪ್ತಿಗೆ ಬರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ಮುಖ್ಯ ರಸ್ತೆಗಳು 259 ವಾರ್ಡ್ ರಸ್ತೆಗಳಿವೆ. ಪ್ರಮುಖ ರಸ್ತೆಯಾದ ಸಂಪಿಗೆ ರಸ್ತೆಯಲ್ಲಿ ಐದಾರು ತಿಂಗಳಿಂದ ವೈಟ್ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇನ್ನು 90ಕ್ಕೂ ಅಧಿಕ ವಾರ್ಡ್ ರಸ್ತೆಗಳ ಅಭಿವೃದ್ಧಿಗಾಗಿ ಚರಂಡಿಗಳು ಪಾದಚಾರಿ ಮಾರ್ಗ ಮತ್ತು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಇದರಿಂದ ಜನರು ಓಡಾಡಲು ಮತ್ತುವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿದ ಹಿನ್ನೆಲೆ ಇದೀಗ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಅವಾಚ್ಯ ಪದದಿಂದ ನಿಂದಿಸಿ ‘ಬ್ಯಾ…. ಅಧಿಕಾರಿಗಳಾ ರಸ್ತೆ ಸರಿಪಡಿಸ್ರೋ’ ಎಂದು ಮುದ್ರಿಸಿದ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.