ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಲೇಖನಿ ಖಡ್ಗಕ್ಕಿಂತ ಹರಿತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಸಾರ್ವಜನಿಕರ ಕಣ್ಣು ಮತ್ತು ಕಿವಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಸರಕಾರದ ಲೋಪದೋಷಗಳನ್ನು ಹೋಗಲಾಡಿಸಲು ಕಾವಲುಗಾರನಂತೆ ಕೆಲಸ ಮಾಡುತ್ತಿವೆ. ಪ್ರಜಾಪ್ರಭುತ್ವವನ್ನು ಸಕ್ರೀಯಗೊಳಿಸುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಈಗ ವಸ್ತು ನಿಷ್ಠ ವರದಿ ಹೆಚ್ಚಾಗಬೇಕಿದೆ. ಟಿ ಆರ್ ಪಿ ಹೆಚ್ಚಳಕ್ಕಾಗಿ ಮತ್ತು ದಿನಪತ್ರಿಕೆಗಳ ಮಾರಾಟ ಸಂಖ್ಯೆ ಹೆಚ್ಚಳಕ್ಕಾಗಿ ಅತೀ ರಂಜಿತ ವರದಿಗಳನ್ನು ಮಾಡಬಾರದು. ಹಲವು ಬಾರಿ ಸುದ್ದಿಗಳ ವೈಭವೀಕರಣದಿಂದ ದೇಶದ ಆಂತರಿಕ ಭದ್ರತೆಗೂ ಆತಂಕ ತಂದೊಡ್ಡುವಂತಾಗುತ್ತಿದೆ. ಎಂದು ಈ ಹಿಂದೆ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಧಾಳಿ ಕುರಿತು ಧಾಳಿಯ ವಿದ್ಯುನ್ಮಾನ ಮಾಧ್ಯಮಗಳು ಮಾಡಿದ ವರದಿ ಹಾಗೂ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ವ್ಯಕ್ತವಾದ ಅಭಿಪ್ರಾಯದ ಕುರಿತು ಅವರು ಬೆಳಕು ಚೆಲ್ಲಿದರು.
ಭದ್ರತೆ ಮತ್ತು ಅತ್ಯಾಚಾರದಂಥ ವರದಿಗಳನ್ನು ಮಾಡುವಾಗ ಮಾಧ್ಯಮಗಳಿಗೆ ಸೂಕ್ಷ್ಮತೆ ಇರಬೇಕು. ಇಂಥ ಪ್ರಕರಣಗಳ ಬಗ್ಗೆ ವಿಚಾರಣೆ ರೀತಿಯಲ್ಲಿ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತವೆ. ಇದು ಸರಿಯಲ್ಲ. ಅಪರಾಧವನ್ನು ಸಾಬೀತು ಪಡಿಸುವುದು ನ್ಯಾಯಾಂಗದ ಜವಾಬ್ದಾರಿಯಾಗಿದೆ. ಪ್ರಕರಣಗಳ ಅಂಕಿ- ಅಂಶಗಳನ್ನು ಮಾಧ್ಯಮಗಳು ಜನರ ಮುಂದಿಡಬೇಕೇ ಹೊರತು ತಾವೇ ವಿಚಾರಣೆ ನಡೆಸುವಂತಿರಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಪತ್ರಕರ್ತರ ಸ್ವಾತಂತ್ರ್ಯ ವಿಚಾರದಲ್ಲಿ ವಿಶ್ವದ ಒಟ್ಟು 180 ರಾಷ್ಟ್ರಗಳಲ್ಲಿ ಭಾರತದ 140ನೇ ಸ್ಥಾನ ಪಡೆದಿದೆ. ಸುದ್ದಿ ಪಾರದರ್ಶಕವಾಗಿರಬೇಕು. ಅಷ್ಟೇ ಅಲ್ಲ, ಜವಾಬ್ದಾರಿಯುತವಾಗಿ ವಸ್ತುನಿಷ್ಠವಾಗಿರಬೇಕು. ಕೋಮು ಗಲಭೆಯಂಥ ಸಂದರ್ಭಗಳು ಸೇರಿದಂತೆ ಇತರ ಸುದ್ದಿಗಳ ವಿಚಾರದಲ್ಲಿ ನಿಷ್ಪಕ್ಷಪಾತ ವರದಿ ಮಾಡಬೇಕು ಎಂದು ಅವರು ಹೇಳಿದರು. ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಈ ಕೆಲಸ ಮಾಡಬೇಕಾದರೆ ಆ ಮಾಧ್ಯಮ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿರಬೇಕು. ಸುದ್ದಿ ಸಂಸ್ಥೆಗಳ ಮಾಲಿಕರು ಯಾವುದೇ ಒತ್ತಡಕ್ಕೊಳಗಾಗಬಾರದು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಈ ಸಂದರ್ಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಎಎಸ್ಪಿ ಡಾ. ರಾಮಲಕ್ಷ್ಮಣ ಅರಸಿದ್ದಿ, ಪೌರಾಯುಕ್ತ ವಿಜಯ ಮೆಕ್ಕಳಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲಿಕ ಬಾಳೋಜಿ, ಹಿರಿಯ ಪತ್ರಕರ್ತರಾದ ಸುಭಾಷ ಹೂಗಾರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಡಿ. ಬಿ. ವಡವಡಗಿ, ಮೋಹನ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ