1ನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಪ್ರಸಕ್ತ ವರ್ಷ ಈಗಾಗಲೇ ದಾಖಲಾತಿ ಆರಂಭವಾಗಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಯೋಮಿತಿ ನಿಗದಿಪಡಿಸಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು 2012ರ ಕಡ್ಡಾಯ ಶಿಕ್ಷಣ ನಿಯಮಗಳನುಸಾರ ಶಿಕ್ಷಣ ಇಲಾಖೆ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ಇದೀಗ 1ನೇ ತರಗತಿ ದಾಖಲಾತಿಗೆ ಮಕ್ಕಳ ವಯೋಮಿತಿ ಸಂಬಂಧ ಮಾಡಿದ್ದ ಎಲ್ಲ ಆದೇಶಗಳನ್ನು ಹಿಂಪಡೆದು ವಯೋಮಿತಿ ಮಾರ್ಪಡಿಸಿ ಹೊಸ ಆದೇಶ ಹೊರಡಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದ್ದು ಬಹುತೇಕ ಶಾಲೆಗಳಲ್ಲಿ ದಾಖಲಾತಿ ನಡೆದಿದೆ ಆದ್ದರಿಂದ ಮುಂದಿನ ವರ್ಷದಿಂದ ಈ ಆದೇಶ ಅನ್ವಯವಾಗಲಿದೆ.