ಇಂಡಿ: ಗುರುವರ್ಯರು ಪ್ರಾಚೀನ ಕಾಲದಿಂದ ನಮ್ಮ ದೇಶದಲ್ಲಿ ಸಂಸ್ಕೃತಿಯನ್ನು ನೀಡಿದ್ದಾರೆ. ಸಮಾಜದ ಬದಲಾವಣೆಯ ಪ್ರೇರಕ ಶಕ್ತಿ ಎಂದರೆ ಗುರು. ಅರಿವೇ ಗುರು, ಗುರುವೇ ದೈವ.ಜಗತ್ತಿನ ಎಲ್ಲ ಸಾಧಕರ ಹಿಂದೆ ಗುರು ಇರುವನು.ಎಲ್ಲರನ್ನೂ ಪರಿಪೂರ್ಣತೆ ಮಾಡುವವರೇ ಶಿಕ್ಷಕರು ಎಂದು ಇಂಡಿ ಮತಕ್ಷೇತ್ರದ ಶಾಸಕರು ಹಾಗೂ ಅಂದಾಜುಗಳ ಸಮಿತಿಯ ಅಧ್ಯಕ್ಷರಾದ ಯಶವಂತರಾಯಗೌಡ ಪಾಟೀಲ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಅವರ ವತಿಯಿಂದ ಭಾರತರತ್ನ ಡಾ.ಎಸ್ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದರು.
1950-60 ರ ದಶಕದಲ್ಲಿ ಸಮಾಜದ ಚಿಂತನೆಗೆ, ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ ಈ ನಾಡಿನ ಬಂಥನಾಳದ ಶಿವಯೋಗಿಗಳು.ವೈಚಾರಿಕ ವಿಚಾರಧಾರೆ,ಸರ್ವಧರ್ಮಗಳ ಚಿಂತಕರಾಗಿದ್ದರು.ಅವರು ಜಿಲ್ಲೆಯ ನೀರಾವರಿಗಾಗಿ ಹೋರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಡಾ.ಎಸ್ ರಾಧಾಕೃಷ್ಣನ್ ಅವರು ಈ ದೇಶದ ಆದರ್ಶ ಶಿಕ್ಷಕರಾಗಿ,ಆದರ್ಶ ರಾಷ್ಟ್ರಪತಿಯಾಗಿ ಇಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ. ಅನುಕರಣೆಯ ಬದುಕನ್ನು ಇಂದಿನ ಶಿಕ್ಷಕರು ರೂಢಿಸಿಕೊಂಡು ಜಗತ್ತಿನ ಹೊಸ ಹೊಸ ಆವಿಷ್ಕಾರಗಳನ್ನು ಇಂದಿನ ಮಕ್ಕಳಿಗೆ ಬೋಧಿಸಬೇಕು.
ಶಿಕ್ಷಕರೇ ತಮ್ಮ ಸ್ವ-ನೀತಿಯಿಂದ ಪಾಠ ಬೋಧಿಸಬೇಕು ಎಂದು ಹೇಳಿದರು.
ನಮ್ಮ ಇಂಡಿ ಭಾಗ ಎಲ್ಲ ರಂಗಗಳಲ್ಲಿ ಮುಂದೆ ಬರಬೇಕು. ರಾನಡೆಯಂತಹ ವ್ಯಕ್ತಿತ್ವ-ಪರಂಪರೆಯನ್ನು ಸ್ಮರಿಸಬೇಕು.ಇಂದು ಇಸ್ರೋ ಬಹು ದೊಡ್ಡ ಸಾಧನೆ ಮಾಡಿದ್ದು,ನಮ್ಮ ಮಕ್ಕಳು ವಿಜ್ಞಾನಿಗಳಂತೆ ಸಾಧನೆ ಮಾಡಲಿ. ನಾವೆಲ್ಲರೂ ಈ ನಾಡಿನ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳನ್ನು ನಿಸರ್ಗದಲ್ಲಿ ಕಾಣುತ್ತ ಪರಿಸರ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಶಿಕ್ಷಣವು ಸಮಾಜದ ಬೆಳವಣಿಗೆಗೆ ಬಹುಮುಖ್ಯ. ನಮ್ಮ ಸಂಸ್ಕೃತಿ ಬಹು ಶ್ರೀಮಂತ ಸಂಸ್ಕೃತಿಯಾಗಿದೆ ಎಂದು ಹೇಳಿದರು.
ವಿಶೇಷ ಆವ್ಹಾನಿತರಾದ ಇಂಡಿ ಉಪವಿಭಾಗಾಧಿಕಾರಿಗಳು, ಉಪವಿಭಾಗೀಯ ದಂಡಾಧಿಕಾರಿಗಳಾದ ಅಬೀದ್ ಗದ್ಯಾಳ ಮಾತನಾಡಿ,ನಮ್ಮ
ಜ್ಞಾನವನ್ನು ಎಲ್ಲರಿಗೂ ಹಂಚುವದರಿಂದ ಜ್ಞಾನ ವೃದ್ಧಿಯಾಗುತ್ತದೆ.ಜಗತ್ತಿನ ಅತಿ ಸವಾಲಿನ ಕೆಲಸವೇ ಶಿಕ್ಷಕ ವೃತ್ತಿ. 1964 ರ ಕೊಠಾರಿ ಆಯೋಗದಲ್ಲಿ ತಿಳಿಸಿದಂತೆ ದೇಶದ ಭದ್ರ ಬುನಾದಿಗೆ ಶಿಕ್ಷಕರೇ ಆಧಾರ. ಹಾಗಾಗಿ ಶಿಕ್ಷಕರು ಸಮಾಜದ ರೂವಾರಿ,ಕರ್ತೃವೇ ಆಗಿದ್ದಾರೆ.ಅವರು ಸಮಾಜ ನಿರ್ಮಾಣದ ಹೊಣೆಗಾರಿಕೆ ಅರಿತು ನಡೆಯಬೇಕು. ಮಕ್ಕಳ
ಭವಿಷ್ಯದಲ್ಲಿ ದೇಶದ ಭವಿಷ್ಯ ಅಡಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಮೌಲ್ಯ ಶಿಕ್ಷಣ ಕಲಿಸುವಂತದ್ದಲ್ಲ.
ನಮ್ಮ ಜೀವನದಲ್ಲಿ ನಾವೇ ಅಳವಡಿಸಿಕೊಂಡು ಮಾಡರಿಯಾಗಬೇಕು ಎಂದು ಹೇಳಿದರು.
ಬಸವನ ಬಾಗೇವಾಡಿಯ ಯರನಾಳ ಸಂಸ್ಥಾನ ಮಠದ ಮ.ನಿ.ಪ್ರ ಗುರುಸಂಗನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕಾಯ ಅಳಿದರೂ ಕಾರ್ಯ ಉಳಿಯಬೇಕು.ಸಮಾಜದಲ್ಲಿ ಬಿದ್ದವರನ್ನು ಮೇಲೆ ಎಬ್ಬಿಸುವವರೇ ಶಿಕ್ಷಕರು.ಮನದ ಕತ್ತಲೆ ಹೋಗಲಾಡಿಸುವವರೇ ಶಿಕ್ಷಕರು.ಒಬ್ಬ ಒಳ್ಳೆಯ ಶಿಕ್ಷಕ ಸಮಾಜವನ್ನು ಪರಿವರ್ತನೆ ಮಾಡಬಲ್ಲ.ಭಾರತದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ.ಶಿಕ್ಷಣ ಶಿಕ್ಷಣವಾಗಿರಬೇಕು ಆದರೆ ಅದು ಮತೀಯ ಶಿಕ್ಷಣವಾಗಿರಬಾರದು. ಮಕ್ಕಳಲ್ಲಿ ದೇಶಾಭಿಮಾನ, ಸಂಸ್ಕಾರ,ಪ್ರಾಮಾಣಿಕತೆ ಬೆಳೆಸಿ,ಶಿಕ್ಷಕರು ಸ್ವತಃ ಅನುಭವಿಸಿ ಮಕ್ಕಳಿಗೆ ಬೋಧಿಸಬೇಕು. ನುಡಿದಂತೆ ನಡೆಯುವ ವರ್ತನೆಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ,ಗುಣಾತ್ಮಕ ಶಿಕ್ಷಣ ನೀಡುವದೇ ನಮ್ಮ ಇಲಾಖೆಯ ಗುರಿಯಾಗಿದ್ದು,ಅದನ್ನು ಸಾಧಿಸಲು ಎಲ್ಲರೂ ಪರಿಶ್ರಮಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಆರ್ ನಡುಗಡ್ಡಿ ಸ್ವಾಗತಿಸಿ, ಪರಿಚಯಿಸಿದರು.
ಸಮಾರಂಭದಲ್ಲಿ ಇಂಡಿ ತಹಶೀಲ್ದಾರರು ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಬಿ ಎಸ್ ಕಡಕಭಾವಿ,ಇಂಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ ಮದ್ದಿನ,ಶಿಕ್ಷಣ ಸಂಯೋಜಕರು ಹಾಗೂ ನೋಡಲ್ ಅಧಿಕಾರಿಗಳಾದ ಎಂ ಬಿ ಡೇಂಬ್ರೆ,ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ ಎಸ್ ಲಾಳಸೇರಿ,ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ ಎಚ್ ಯರಗುದ್ರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ವಿ ಹರಳಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್ ಡಿ ಪಾಟೀಲ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಓ ಹೂಗಾರ,ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್ ಎಂ ಕಾಳೆ,ಸಿದ್ದು ಹತ್ತಳ್ಳಿ ಸೇರಿದಂತೆ ತಾಲೂಕಿನ ಎಲ್ಲ ಶಿಕ್ಷಕ ಸಂಘಗಳ, ಸರ್ಕಾರಿ ನೌಕರರ ಸಂಘ, ಮಹಿಳಾ ಸಂಘಟನೆಗಳ, ಬೋಧಕೇತರ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಶಿಕ್ಷಕರು,
ಕಾರ್ಯಾಲಯದ ಸಿಬ್ಬಂದಿಯವರು, ಸಿ ಆರ್ ಪಿ , ಬಿ ಆರ್ ಪಿ , ಇ ಸಿ ಓ , ಬಿಐಆರ್ ಟಿ , ಪಿ ಈ ಓ ರವರು ಎಸ್ ಡಿ ಎಂ ಸಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.