ಪುರಾತನ ಸರಕಾರಿ ಶಾಲೆಗಿಲ್ಲ ಕಾಯಕಲ್ಪ!
ಇಂಡಿ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಅಂಬೇಡ್ಕರ ವೃತ್ತದ ಮತ್ತು ಪುರಸಭೆ ಸಮೀಪ ಇರುವ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ ೧ ನಿರ್ವಹಣೆ ಮತ್ತು ಅಭಿವೃದ್ದಿ ಇಲ್ಲದೆ ಪಾಳು ಬಿದ್ದಿದ್ದು ಪುರಸಭೆ ನಿರ್ಲಕ್ಷದಿಂದಾಗಿ ಪುರಾತನ ಶಾಲೆಗೆ ಹೈಟೆಕ್ ಸ್ಪರ್ಶ ಎನ್ನುವದು ಮರಿಚಿಕೆ ಯಾಗಿದೆ.
ಶಾಲೆಯ ಕಟ್ಟಡವನ್ನು ೧೯೭೫ ರಲ್ಲಿ ಪುರಸಭೆಯವರು ಕಟ್ಟಿ ಶಿಕ್ಷಣ ಇಲಾಖೆಗೆ ಸಹಕರಿಸಿದ್ದಾರೆ.ಆಗಿನ ಪುರಸಭೆ ಅಧ್ಯಕ್ಷರಾದ ಅಣ್ಣಪ್ಪ ದೇವರ, ಹಳ್ಳಿ ಪದಮಣ್ಣ, ಕಲ್ಲಪ್ಪ ಮಸಳಿ, ತಮ್ಮಣ್ಣ ಧನಪಾಲ ಸೇರಿದಂತೆ ಅನೇಕ ಶಿಕ್ಷಣ ಪ್ರೇಮಿಗಳು ಈ ಕಟ್ಟಡವನ್ನು ಕಟ್ಟಿ ಶಿಕ್ಷಣ ಇಲಾಖೆಗೆ ನೀಡಿದ್ದರು.
ನಂತರದಿಂದ ಈ ಕಟ್ಟಡದ ಕಡೆಗೆ ಪುರಸಭೆಯವರು ನೋಡಲೇ ಇಲ್ಲ. ಈ ಕಟ್ಟಡದಲ್ಲಿ ೨೦ ಕೋಣೆಗಳಿದ್ದು ೧೦ ಕೋಣೆಗಳನ್ನು ಸಂಪೂರ್ಣ ದುರಸ್ತಿ ಮಾಡುವ ಅವಶ್ಯಕತೆ ಇದೆ. ಕೆಲವೊಂದು ಕೋಣೆಗಳ ಮೇಲ್ಚಾವಣೆ ಬಿದ್ದಿದ್ದು ಕೋಣೆಗಳು ಶಿಥಿಲಾವಸ್ಥೆಯಲ್ಲಿವೆ. ಅದಲ್ಲದೆ ಶಾಲೆಯ ಒಳಗೆ ಹೋಗಲು ಮುಖ್ಯ ದ್ವಾರ ವಿದ್ದು ಮೇಲ್ಚಾವಣೆ ಕಡಿದು ಬಿಳುವ ಭಯದಲ್ಲಿ ಆ ದ್ವಾರ ಬಂದು ಮಾಡಿ ಬೇರೆ ಬಾಗಿಲಿನಿಂದ ಮಕ್ಕಳು ಒಳಗೆ ಹೋಗುತ್ತಾರೆ.
ಮೊದಲು ಇಲ್ಲಿ ೫೦೦ ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಕುಸಿದಿದೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಂಥಾಲಯ, ಶೌಚಾಲಯ ಸೇರಿದಂತೆ ಯಾವದೇ ವ್ಯವಸ್ಥೆ ಇಲ್ಲ.
ಈ ಸರಕಾರಿ ಶಾಲೆಯನ್ನು ಉಳಿಸಿ ಅಭಿವೃದ್ದಿ ಪಡಿಸಬೇಕಾದ ಜವಾಬ್ದಾರಿ ಪುರಸಭೆ ಮೇಲಿದೆ. ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಾ ಬರುತ್ತಿವೆ.ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಬಹುದು ಪೋಷಕರು ಚಿಂತಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಂತಹ ಪೋಷಕರು ಸರಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಪುರಸಭೆ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವದು ಪೋಷಕರ ಅಭಿಪ್ರಾಯವಾಗಿದೆ.
ಸಧ್ಯ ಪುರಸಭೆಯಲ್ಲಿ ಆಡಳಿತ ಅಧಿಕಾರಿಯಾಗಿ ಇಂಡಿಯ ಕಂದಾಯ ಉಪವಿಭಾಗಾಧಿಕಾರಿಗಳು ಇದ್ದಾರೆ. ಅವರು ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಡಿಈಡಿ ವಿದ್ಯಾರ್ಥಿ. ಶಿಕ್ಷಣ ಪ್ರೇಮಿಗಳು ಅವರ ಅಧಿಕಾರದ ಅವಧಿಯಲ್ಲಿ ಶಾಲೆ ಹೈಟೆಕ್ ಸ್ಪಶ್ ನೀಡುವರೇ ಕಾದುನೋಡಬೇಕಿದೆ.
ಕೋಟ್
ಸದರಿ ಶಾಲಾ ಕಟ್ಟಡ ಪುರಸಭೆ ಆಧೀನದಲ್ಲಿದೆ.ಹೀಗಾಗಿ ಶಿಕ್ಷಣ ಇಲಾಖೆಯಿಂದ ಈ ಕಟ್ಟಡ ದುರಸ್ತಿಗೆ ಹಣ ನೀಡಲು ಅವಕಾಶಗಳಿರುವದಿಲ್ಲ.
ಎಸ್.ಬಿ.ಪಾಟೀಲ ಇಸಿಒ ಶಿಕ್ಷಣ ಇಲಾಖೆ ಇಂಡಿ
ಕೋಟ್
ಸದರಿ ಶಾಲೆ ದುರಸ್ತಿ ಅಥವಾ ನೂತನ ಮೇಲ್ಚಾವಣೆಗೆ ಪುರಸಭೆಯಿಂದ ಅನುದಾನಕ್ಕೆ ಪ್ರಯತ್ನಿಸುತ್ತೇವೆ. ಇಲ್ಲವೆ ಸದಸ್ಯರ ಸಹಕಾರದಿಂದ ಈ ಕಟ್ಟಡಕ್ಕೆ ಪುರಸಭೆಯಿಂದ ಹಣ ನೀಡಲು ಪ್ರಯತ್ನಿಸಲಾಗುತ್ತಿದೆ.
ಅಬೀದ್ ಗದ್ಯಾಳ
ಕಂದಾಯ ಉಪವಿಭಾಗಾಧಿಕಾರಿಗಳು ಮತ್ತು ಪುರಸಭೆ ಆಡಳಿತಾಧಿಕಾರಿಗಳು ಇಂಡಿ