ವಿಜಯಪುರ: ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ವಿಜಯಪುರ ಜನತೆ ವಿಮಾನದಲ್ಲಿ ಸಂಚರಿಸುವ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದರು. ವಿಜಯಪುರ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್ಬಸ್ 320 ವಿಮಾನಗಳ ಹಾರಾಟಕ್ಕಾಗಿ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 127.29 ಕೋಟಿ ರೂ.ಗಳ ಹೆಚ್ಚುವರಿ ಅನುದಾನದ ಕಾಮಗಾರಿಗೆ ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದೆ.
ಈ ಎಲ್ಲ ತಾಂತ್ರಿಕ ಹಾಗೂ ಭೌತಿಕ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.ವಿಜಯಪುರದಲ್ಲಿ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ದೊರಕಲಿದ್ದು, ಕೂಡಲ ಸಂಗಮ, ಆಲಮಟ್ಟಿ, ಕೊಲ್ಲಾಪೂರ, ಸೊಲ್ಲಾಪೂರ ಹೀಗೆ ಪ್ರಸಿದ್ಧ ತಾಣಗಳಿಗೆ ಹೋಗಲು ಈ ವಿಮಾಣ ನಿಲ್ದಾಣ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈಗಾಗಲೇ ಈ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ವಿಮಾನ ನಿಲ್ದಾಣ ಎಂದು ಹೆಸರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ಹೇಳಿದರು.“ಹವಾಯಿ ಚಪ್ಪಲವಾಲಾ ಭಿ ಹವಾಯಿ ಜಹಾಜ್ ಮೇ ಘಮನಾ” ಸಾಮಾನ್ಯ ಮನುಷ್ಯನು ವಿಮಾನದಲ್ಲಿ ಹಾರಾಟ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ವಿಜಯಪುರ ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಶಿವಮೊಗ್ಗ, ಹಾಸನ, ರಾಯಚೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ ಹಾಗೂ ಕಾರವಾರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಅವರು ಮಾತನಾಡಿ, ಸೀ-ಪ್ಲೇನ್ಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಅದರನ್ವಯ ರಾಜ್ಯದಲ್ಲಿಯೂ ಈ ಮಾದರಿಯ ಸೀ-ಪ್ಲೇನ್ಗಳ ಹಾರಾಟದ ಮೂಲಕ ಸಾಹಸ ಪ್ರವಾಸೋದ್ಯಮ (ಅಡ್ವೆಂಚರ್ ಟೂರಿಸಂ) ಉತ್ತೇಜಿಸಲು ರಾಜ್ಯ ಸರ್ಕಾರ ಕಾರ್ಯಯೋಜನೆ ರೂಪಿಸುತ್ತಿದ್ದು, ಆಲಮಟ್ಟಿ ಜಲಾಶಯದಲ್ಲಿಯೂ ಸಹ ಸೀ-ಪ್ಲೇನ್ ಹಾರಾಟದ ಅವಕಾಶ ಕಲ್ಪಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ, ಹೀಗಾಗಿ ಈ ಕಾರ್ಯಕ್ಕೆ ಈ ವಿಮಾನ ನಿಲ್ದಾಣ ಪೂರಕವಾಗಲಿದೆ.
ರಾಜ್ಯದ ಕಬನಿ, ಕೆಆರ್ಸ್, ಹಿಡಕಲ್ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸೀ-ಪ್ಲೇನ್ ಹಾರಟಕ್ಕೆ ಅವಕಾಶದ ಕುರಿತು ಸಮೀಕ್ಷೆ ನಡೆಸಲು ಈಗಾಗಲೇ ಕೆಎಸ್ಐಐಡಿಸಿ ಅಧ್ಯಯನ ನಡೆಸುತ್ತಿದೆ ಎಂದರು.ವಿಮಾನ ನಿಲ್ದಾಣದ ಭೌತಿಕ ಹಾಗೂ ತಾಂತ್ರಿಕ ಕಾಮಗಾರಿಗಳ ಪ್ರಗತಿಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮವರ ಮಾತನಾಡಿ, ವಿಜಯಪುರ ವಿಮಾನ ನಿಲ್ದಾಣದಲ್ಲಿ ಎಟಿಆರ್-72 ಮಾದರಿಯ ವಿಮಾನಗಳ ಹಾರಾಟಕ್ಕಾಗಿ 220 ಕೋಟಿ ರೂ. ಮಂಜೂರಾಗಿದ್ದು, ಎರಡು ಹಂತದಲ್ಲಿ ಕಾಮಗಾರಿಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ, ಮೊದಲನೇ ಹಂತದ ಕಾಮಗಾರಿಗಾಗಿ 95 ಕೋಟಿ ರೂ. ಹಾಗೂ ಎರಡನೇಯ ಹಂತದ ಕಾಮಗಾರಿಗೆ 125 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ,
ಮೊದಲನೇಯ ಹಂತದ ಕಾಮಗಾರಿಯಲ್ಲಿ ಶೇ. 64.75 ರಷ್ಟು ಭೌತಿಕ ಹಾಗೂ 64, 75 ಆರ್ಥಿಕ ಪ್ರಗತಿ ಸಾಧಿಸಲಾಗಿದೆ, ಎರಡನೇಯ ಹಂತದ ಸಿವಿಲ್ ಕಾಮಗಾರಿ ಭೌತಿಕ ಪ್ರಗತಿ ಶೇ.40.93 ರಷ್ಟಾಗಿದ್ದು, ಆರ್ಥಿಕ ಪ್ರಗತಿ ಶೇ. 40.93 ರಷ್ಟು ಸಾಧಿಸಲಾಗಿದೆ ಎಂದು ವಿವರಣೆ ನೀಡಿದರು.ಎರಡನೇಯ ಹಂತದ 125 ಕೋಟಿ ರೂ. ಅನುದಾನವನ್ನು ಎರಡು ಉಪಕಾಮಗಾರಿಗಳಾಗಿ ವಿಂಗಡಿಸಿ 106 ಕೋಟಿ ರೂ.ಗಳ ವೆಚ್ಚದಲ್ಲಿ ಸಿವಿಲ್ ಕಾಮಗಾರಿ ಹಾಗೂ 19 ಕೋಟಿ ರೂ.ವೆಚ್ಚದಲ್ಲಿ ಏವಿಯೋನಿಕ್ಸ್, ಸೆಕ್ಯೂರಿಟಿ ಇಕ್ಸೂಪಮೆಂಟ್ಸ್ ಉಪಕಾಮಗಾರಿಗೆ ವಿಂಗಡನೆ ಮಾಡಲಾಗಿದೆ ಎಂದರು. ಈ ಉಪಕಾಮಗಾರಿ ಅಡಿಯಲ್ಲಿ ಬ್ಯಾಗೇಜ್ ಹ್ಯಾಂಡಲಿಂಗ್, ಸೆಕ್ಯೂರಿಟಿ ಸ್ಕಾಯನರ್, ಲ್ಯಾನ್, ಎ.ಸಿ. ಪ್ಲೆಂಟ್ ಇನಾರ್ಫಾಮೇಷನ್ ಡಿಸಪ್ಲೇ ಇತರೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಓಎ ನೀಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ, ಕರ್ನಾಟಕ ರಾಜ್ಯಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಕಾರ್ಯಕಾರಿ ನಿರ್ದೇಶಕ ಡಿ.ಪಿ. ಪ್ರಕಾಶ, ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜು ಮುಜುಂದಾರ, ಇ.ಬಿ.ಚಿಕ್ಕಲಕಿ, ಎಇ. ರವಿ ಪವಾರ, ರೇವಣ್ಣ ಮಸಳಿ, ಹೈಡೆಕ್ ಪಿಎಂಸಿ ಜೋಸ್ ಥಾಮಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.