ವಿಜಯಪುರ: ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳಂತಹ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಅನುರಾಧಾ ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆಯ ಬೆಳವಣಿಗೆಯ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಕುಟುಂಬ ಯೋಜನೆ, ಜನಸಂಖ್ಯೆ ನಿಯಂತ್ರಣದ ಇತರ ರೀತಿಯ ವಿಧಾನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಬಹು ಮುಖ್ಯವಾಗಿದೆ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಭಾರತವು 2027ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ಏರಲಿದೆ. ಇದರ ಜೊತೆಗೆ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ 2100ನೇ ಇಸವಿಗೆ ವಿಶ್ವದ ಜನಸಂಖ್ಯೆ 1100 ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನದ ವರದಿ ಆತಂಕ ಮೂಡಿಸುವಂತಿದೆಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಂಕರ ಹುಣಶ್ಯಾಳ, ನೈಸರ್ಗಿಕ ಸಂಪನ್ಮೂಲಗಳು ಕ್ರಮಸಂಖ್ಯೆಯಂತೆ ಬೆಳೆದರೆ, ಜನಸಂಖ್ಯೆ ಗುಣಾಕಾರದಂತೆ ಬೆಳೆಯುತ್ತಿದೆ. ಜನರು ಮೂಢನಂಬಿಕೆಗಳಿಂದ ಹೊರಬಂದು ಹೆಣ್ಣಾಗಲಿ, ಗಂಡಾಗಲಿ ಒಂದೇ ಮಗುವನ್ನು ಹೊಂದುವ ದೃಢ ನಿರ್ಧಾರ ತೆಗೆದುಕೊಳ್ಳಬೇಕೆಂದರು.
ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಶಿಕ್ಷಕರಾದ ರಾಘು ಮೊಗಳ, ಲಕ್ಷ್ಮೀ ಮಸೂತಿ ಜನಸಂಖ್ಯೆ ಹೆಚ್ಚಳದ ಪರಿಣಾಮದ ಕುರಿತು ಮಾತನಾಡಿದರು.ವೈದ್ಯರಾದ ಡಾ.ಬಸವರಾಜ ಕುಂಬಾರ, ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಸ್ನೇಹಾ ಹಕ್ಕಿ, ಅಂಬಿಕಾ ಶಿರಕನಹಳ್ಳಿ, ಶಂಕ್ರಮ್ಮ ತೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.