ಬೆಳಗಾವಿ ಸೇರಿದಂತೆ ಕರ್ನಾಟದಲ್ಲಿರುವ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ನಿರ್ಣಯ ಅಂಗೀಕರಿಸಲಾಗಿದೆ. ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಮಹರಾಷ್ಟ್ರ ಸಿಎಂ ಏಕನಾಥ್ ಶಿಂದೆ, ಕರ್ನಾಟಕ ಸರ್ಕಾರವೂ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ, ಅಂಗೀಕರಿಸುವ ಮೂಲಕ ಉದ್ದೇಶಪೂರ್ವಕವಾಗಿ ಗಡಿ ಕದನಕ್ಕೆ ಉತ್ತೇಜನ ನೀಡುತ್ತಿದೆ ಎಂದರು. ರಾಜ್ಯ ಸರ್ಕಾರವು 865 ಹಳ್ಳಿಗಳ ಮರಾಠಿ ಮಾತನಾಡುವ ಜನರೊಂದಿಗೆ ದೃಢವಾಗಿ ನಿಂತಿದೆ.ಕರ್ನಾಟಕದಲ್ಲಿರುವ 865 ಮರಾಠಿ ಮಾತನಾಡುವ ಹಳ್ಳಿಗಳ ಇಂಚಿಂಚು ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಸೇರಿಸಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನುಬದ್ಧವಾಗಿ ಹೋರಾಟ ನಡೆಸಲಿದೆ ಎಂದು ಸಿಎಂ ಶಿಂದೆ ಹೇಳಿದರು.ಸಿಎಂ ಮಂಡಿಸಿದ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು.