ಬೊಲೆರೋ ವಾಹನದಲ್ಲಿ ಬಂದ ದರೋಡೆಕೋರರು ಕ್ಯಾಂಟರ್ ವಾಹನ ಅಡ್ಡಗಟ್ಟಿ 32 ಲಕ್ಷ ನಗದು ದರೋಡೆ ಮಾಡಿದಲ್ಲದೇ ಮೂವರಿಗೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ವಿಜಯಪುರದ ಕೊಲ್ಲಾರ ಪಟ್ಟಣದ ಹೊರ ಭಾಗದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕಲಬುರಗಿಯ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವವರ ಹಣವನ್ನು ದೋಚಿದ್ದಾರೆ. ಕ್ಯಾಂಟರ್ ವಾಹನ ಅಡ್ಡಗಟ್ಟಿ ಗಾಜಿಗೆ ಕಲ್ಲು ಎಸೆದು, ರಾಡ್ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿ ಆಗಿದ್ದಾರೆ. ಹಲ್ಲೆಗೀಡಾದ ಚಂದ್ರಕಾಂತ, ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲು ಕೊಡಚಿ ಅವರನ್ನು ಕೊಲ್ಲಾರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.