ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಿದ್ಯಾಲಯದಲ್ಲಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆ, ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಊಟ ವಸತಿ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿ ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ಸೂಚನೆ ನೀಡಿದರು.ತಹಶೀಲ್ದಾರ ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳ ಮಾಹಿತಿ ಪಡೆದುಕೊಂಡರು.ಕುಂದು-ಕೊರತೆ ಸಭೆಯಲ್ಲಿ ನಿಡಗುಂದಿ ಸರ್ಕಾರಿ ಉರ್ದು ಶಾಲೆಗೆ ಮೂಲಭೂತ ಸೌಲಭ್ಯ, ಗೋನಾಳ ಗ್ರಾಮದಲ್ಲಿ ಚಕ್ಕಡಿ ದಾರಿ ಸಮಸ್ಯೆ ನಿವಾರಣೆ, ನಿಡಗುಂದಿ ಎಪಿಎಂಸಿ ಶಾಲೆಯ ಮೇಲ್ಟಾವಣಿ ದುರಸ್ತಿ, ಆಲಮಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ ನಂ.4ರಲ್ಲಿನ ಅಂಗನವಾಡಿ ಶಾಲೆ ದುರಸ್ತಿ, ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಕಂಪೌಂಡ್ ಹಾಗೂ ಗೇಟ್ ನಿರ್ಮಾಣ, ಹೆಬ್ಬಾಳ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆ ನೀಡುವುದು, ನಿಡಗುಂದಿ ಸಾರ್ವಜನಿಕರಿಗಾಗಿ ಗಾರ್ಡನ್ ನಿರ್ಮಾಣ, ನಗರೋತ್ಥಾನ ಯೋಜನೆಯಡಿ ವಾರ್ಡ ನಂ.15ರ ಆರ್.ಆರ್.ಮತ್ತು ಕಾಟಾಪೂರ ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು 11 ಅರ್ಜಿಗಳು ಸ್ವೀಕೃತಗೊಂಡಿದ್ದು, ಅರ್ಜಿಗಳ ವಿಲೇವಾರಿಗೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಿಡಗುಂದಿ ತಹಶೀಲ್ದಾರ ಅನೀಲಕುಮಾರ ಢವಳಗಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.