ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಇತ್ತೀಚೆಗೆ ಅಜಿತ್-1996 ಬ್ಯಾಚಿನ ವಿದ್ಯಾರ್ಥಿಗಳಿಂದ ವಿಶಿಷ್ಟ ಹಾಗೂ ವೈಶಿಷ್ಟಪೂರ್ಣ, ಶಿಸ್ತುಬದ್ಧಗುರವಂದನಾ ಕಾರ್ಯಕ್ರಮ ಜರುಗಿತು. ವಿಜಯಪುರ ನಗರದ ಸೈನಿಕ ಶಾಲೆಯ ‘ಕಂಠಿ’ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ತಾವು ಶಿಕ್ಷಣ ಪಡೆದ ಗುರುಗಳಿಗೆ ವಿದ್ಯಾರ್ಥಿಗಳು ‘ಪಾದ ಪೂಜೆ ಮಾಡುವ ಮೂಲಕ ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಯುರೋಪ್, ಯುಎಸ್,ಯುಕೆ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ದೇಶ-ವಿದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಸೇನೆಯಲ್ಲಿ ಮೂವರು, ಮೂವರು ಭಾರತೀಯ ವಾಯು ಸೇನೆಯಲ್ಲಿ, ಭಾರತೀಯ ಆಡಳಿತ ಸೇವೆಯಲ್ಲಿ, ಕರ್ನಾಟಕ ಆಡಳಿತ ಸೇವೆಯಲ್ಲಿ ಹಲವರು ವೈದ್ಯರಾಗಿ, ಶಿಕ್ಷಕರಾಗಿ, ರಾಜಕೀಯ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕ ಶಾಲೆಯ 1996ರ ಬ್ಯಾಚಿನ 85 ಹಳೆಯ ವಿದ್ಯಾರ್ಥಿಗಳು ಕುಟುಂಬ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಠ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು, ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯವಾಗಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ಹಂತದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಭವಿಷ್ಯ ರೂಪಿಸುವ ಶಿಕ್ಷಕರನ್ನು ನೆನೆಪಿಸಿಕೊಂಡು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬಗುರು ತನ್ನ ಶಿಷ್ಯ ತನಗಿಂತ ಪಾಂಡಿತ್ಯಪೂರ್ಣ ವಿದ್ವಾಂಸರಾಗಬೇಕೆಂದು ಬಯಸುತ್ತಾರೆ. ಇಂತಹ ಗುರು-ಶಿಷ್ಯರ ಸಂಬಂಧವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣವಾಗಿದೆ.ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಕಾರ್ಯಕ್ರಮ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಲಿ ಎಂದು ಹೇಳಿದರು. ಕಳೆದ 2021ಕ್ಕೆ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದ 1996ರ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿತ್ತು. ಕೋವಿಡ್-19ರ ಹಿನ್ನಲೆಯಲ್ಲಿ 2021ರ ಬದಲಾಗಿ ಪ್ರಸಕ್ತ ವರ್ಷ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು,1989ರಲ್ಲಿ 5ನೇ ತರಗತಿಗೆ ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆದು, 1996ರ ಈ ಬ್ಯಾಚಿನಲ್ಲಿಯೇ ನಾನೂ ಒಬ್ಬ ವಿದ್ಯಾರ್ಥಿಯಾಗಿದ್ದೆ ಎಂಬುದು ನನಗೆ ಹೆಮ್ಮೆಯಾಗುತ್ತಿದೆ.ನಾನು ಶಿಕ್ಷಣ ಪಡೆದ ಜಿಲ್ಲೆಯಲ್ಲಿಯೇ ನಾನು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು, ಈ ಜಿಲ್ಲೆಯ ಋಣಾನುಭಂಧವಾಗಿದೆ ಎಂದು ಹೇಳಿದರು.
1996ರ ಬ್ಯಾಚಿನ ವಿವಿಧ ವಿದ್ಯಾರ್ಥಿಗಳು ತಮ್ಮ ಜೀವನಾನುಭವದ ಕುರಿತು ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಅತ್ಯಮೂಲ್ಯ ಸಲಹೆ, ವಿಚಾರಗಳನ್ನು ಹಂಚಿಕೊಂಡು ತಮ್ಮವಿದ್ಯಾರ್ಥಿ ಜೀವನದ ಘಟ್ಟಗಳ ಕುರಿತು ಮೆಲಕು ಹಾಕಿ, ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿ, ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಶಿಕ್ಷಣ ಪಡೆದ ಶಿಕ್ಷಕರ ಗೌರವ ಹೆಚ್ಚಿಸಬೇಕು. ಸೈನಿಕ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ವಿವಿಧ ಶಿಕ್ಷಕರು ಮಾತನಾಡಿ, 1996ರ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು 25 ವರ್ಷ ಕಳೆದರೂ, ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮಶಿಸ್ತು-ಬದ್ಧತೆಯನ್ನು ತೋರಿದ್ದಾರೆ. ಅವರು ತೋರಿದ ಆದರ, ಸತ್ಕಾರ, ಗೌರವ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ 1996 ಬ್ಯಾಚಿನ ಶಿಕ್ಷಕರಾದ ಟಿ.ಜಿ.ಸುಬ್ರಮಣಿಯಂ, ಸಿ.ಕೆ.ರಾವ್, ಮಾಧವನ್ ಪೊನ್ನಣ್, ಅಸ್ಲಮ್ ಖಾನ್, ಮಣಿಕವಸಗಮ್,ಸಿ.ವಾಯ್. ಬಡಿಗೇರ, ಮಸಿಲ್ಮಣಿ, ವಿ.ಎನ್.ಮನ್ನಾಪುರ, ಆರ್.ಕೆ. ಇನಾಂದಾರ, ಎಸ್.ಕೆ.ನಾಯಕ್, ಬಿ.ಎಸ್.ಹಂಚಿನಾಳ, ಸಿ. ಎಸ್.ಜಾಧವ, ಡಿ.ವಿಜಯಕುಮಾರ, ಕೆ.ದಾಮೋದರ, ರಾಮಮೂರ್ತಿ, ಸಿ.ಎಂ.ಹಿರೇಮಠ, ಎಂ.ಎಚ್.ಸುರೇಶ, ರಾಮರಾವ್, ಎಸ್.ಬಿ. ಸತ್ತಿಕರ, ಎಂ.ಪಿ.ದೇಸಾಯಿ, ಎಂ. ಯು.ನಾಯಕ್,ಮೊಹಾಂತಿ, ಎಸ್.ವಿ.ಜೋಸೆಫ್, ಬಸವರಾಜ ಕಡ್ಡಿ ಹಾಗೂ ಎಸ್.ವಾಯ್.ಪಾಟೀಲ ಅವರಿಗೆ ಸಂಸ್ಕೃತಿಯ ಪ್ರತೀಕವಾಗಿ ಗುರುಗಳಿಗೆ ಪಾದಪೂಜೆ ಮಾಡುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ಅವಿಸ್ಮರಣೀಯ ವಾಗಿಸಿದರು. ಕಾರ್ಯಕ್ರಮದಲ್ಲಿ 1996ರ ಬ್ಯಾಚಿನ್ ಶಾಲಾ ಕ್ಯಾಪ್ಟನ್ ಅಜಯಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು.ಉಪ ಪ್ರಾಚಾರ್ಯ ಕಮಾಂಡರ್ ಸುರುಚಿ ಕೌರ್, ಆಡಳಿತಾಧಿಕಾರಿ ಸ್ಕಾಡನ್ಡರ್ ಆಕಾಶ ವತ್ಸ, ಹಿರಿಯ ಶಿಕ್ಷಕರಾದ ಸಿ.ರಾಮರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಾಫೀ ಟೇಬಲ್ ಪುಸ್ತಕ ಬಿಡುಗಡೆಗೊಳಿಸಲಾಯಿತು.ಪೂಜಾ ಭೂಯ್ಯಾರ ಹಾಗೂ ತಂಡದವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಹಾಂತೇಶ ಶೆಟ್ಟರ ಅವರು ಸ್ವಾಗತಿಸಿದರು.ಅಲ್ತಾಫ್ ಕೋಜ್ ಮತ್ತು ಪೊನ್ನಪ್ಪ ನಿರೂಪಿಸಿದರು.ಎಸ್.ಆರ್.ಪಾಟೀಲ ವಂದಿಸಿದರು.ಸೈನಿಕ ಶಾಲಾ ಗೀತೆ ಹಾಗೂ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.