ಇಂಡಿ: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಸಿರುಮನೆ ಪರಿಣಾಮದಿಂದಾಗಿ, ವಾತಾವರಣದ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು ಜಾಗತಿಕ ಕಳವಳಕ್ಕೆ ಕಾರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ ಹೇಳಿದರು.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಾಮಾಜಿಕ ಅರಣ್ಯ ವಲಯ,ಆರ್ ಎಂ ಶಹಾ ಪಬ್ಲಿಕ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಹೆಚ್ಚಾಗುತ್ತಿರುವ ವಾಣಿಜ್ಯ ಉದ್ಯಮಗಳು, ವಾಹನಗಳ ಸಂಖ್ಯೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ಮುಂತಾದ ಚಟುವಟಿಕೆಗಳಿಂದ ಪರಿಸರ ಮಾಲಿನ್ಯವಾಗಿ ಗಾಳಿ, ಭೂಮಿ ಮತ್ತು ನೀರು ವಿಷಪೂರಿತವಾಗುತ್ತಿದೆ.ಇದನ್ನು ತಡೆಗಟ್ಟಬೇಕಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಆರ್ ನಡಗಡ್ಡಿ ಮಾತನಾಡಿ, ಸಮಸ್ತ ಜೀವ ಕುಲಕ್ಕೂ ಆಸರೆ ನೀಡಿದ, ಅಡಿಗಡಿಗೆ ಮಾನವನ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವ ಭೂಮಿಯ ರಕ್ಷಣೆ ನಮ್ಮ ಇಂದಿನ ಆಧ್ಯತೆಯಾಗಿದೆ ಎಂದು ಹೇಳಿದರು.
ಮುಖ್ಯ ಉಪನ್ಯಾಸ ನೀಡಿದ ಸಂತೋಷ ಬಂಡೆ,
ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ.ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ ಎಲ್ಲಕ್ಕೂ ಬೆಲೆ ಕಟ್ಟುವ ಕಾಲ ಬಹಳ ದೂರವಿಲ್ಲ, ಇರುವ ಒಂದೇ ಭೂಗ್ರಹವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯವಾಗುತ್ತದೆ ಎಂದು ಹೇಳಿದರು.
ಆರ್ ಎಂ ಶಹಾ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಡಿ ಆರ್ ಶಹಾ ಅಧ್ಯಕ್ಷತೆ ವಹಿಸಿದ್ದರು.ಉಪವಲಯದ ಅರಣ್ಯಾಧಿಕಾರಿ ರಾಜೇಂದ್ರ ಹುಲ್ಲೂರ ಮಾತನಾಡಿದರು.
ಜಂಟಿ ಕಾರ್ಯದರ್ಶಿ ಭಾಗ್ಯಜ್ಯೋತಿ ಕೊಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಿ ಆರ್ ಪಿ ಅಧಿಕಾರಿ ಎ ಜಿ ಚೌಧರಿ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಪರವೀನ ಜಮಾದಾರ, ಮುಖ್ಯ ಶಿಕ್ಷಕ ಪ್ರಕಾಶ ಪಾಟೀಲ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಹಾಜಿ ಬಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸ್ಕೌಟ್ ಮಾಸ್ಟರ್ ದತ್ತಾತ್ರೇಯ ಕೊಳಾರಿ ಅವರ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು. ಬೇಸಿಗೆ ಶಿಬಿರದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.