ನಿತ್ಯವೂ ಚಿಂವ್.. ಚಿಂವ್ ಗುಟ್ಟುತ್ತಾ, ಬೆಳ್ಳಂಬೆಳಗ್ಗೆ ಆಹಾರಕ್ಕಾಗಿ ಅಲೆಯುತ್ತಿದ್ದ, ಕಾಳುಗಳನ್ನು ಹೆಕ್ಕುತ್ತಾ ಕೈಗೆ ಸಿಗದಂತೆ ಸುರಕ್ಷಿತ ಅಂತರ ಕಾಪಾಡಿಕೊಂಡು, ಹತ್ತಿರ ಹೋದಲ್ಲಿ ತಕ್ಷಣ ಪುರ್ರನೆ ಹಾರಿ ಹೋಗುತ್ತಿದ್ದ ಪುಟಾಣಿ ಗುಬ್ಬಚ್ಚಿಗಳನ್ನು ಇಂದು ನಾವು ಕಾಣುವುದೇ ವಿರಳ.
ಮರೆಯಾಗುತ್ತಿರುವ ಪುಟ್ಟ ಗುಬ್ಬಚ್ಚಿಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಣ ಸ್ನೇಹಿತರ ಬಳಗ ತಂಡದಿಂದ ನಗರದ ವಿವಿಧ ಗಾರ್ಡನ್ ಗಳಲ್ಲಿ ಅವುಗಳಿಗಾಗಿ ನೀರು ನೀಡುವ ಕೆಲಸ ಮಾಡುತ್ತಿದ್ದು ಅಳಿವಿನಂಚಿಗೆ ಬಂದಿರುವ ಗುಬ್ಬಚ್ಚಿಗಳಿಗೆ ಆಶ್ರಯದಾತರಾಗಿದ್ದಾರೆ.
ಹೌದು, ಸುಡು ಬಿಸಿಲಿನ ಬೇಸಿಗೆಯಲ್ಲಿ ಮಾನವರಿಗೆ ಕಷ್ಟವಾಗುತ್ತಿದೆ. ಇನ್ನು ಪ್ರಾಣಿ, ಪಕ್ಷಿ, ಹಕ್ಕಿಗಳ ಸ್ಥಿತಿ ಹೇಳತೀರದು. ಎಲೆಕ್ಟ್ರಾನಿಕ್ ತರಂಗಳಿಗೆ ಸಿಲುಕಿ ಗುಬ್ಬಚ್ಚಿಗಳು ಕಣ್ಮರೆಯಾಗಿವೆ. ಗಿಡ-ಮರಗಳು ಸಹ ಕಡಿಮೆಯಾಗಿವೆ. ಮನುಷ್ಯ ಮಜ್ಜಿಗೆ, ಲಸ್ಸಿ, ಕೂಲ್ಡ್ರಿಂಕ್ಸ್ ಕುಡಿದು ತಣ್ಣಗಾಗುತ್ತಾರೆ. ಆದರೆ ಪ್ರಾಣಿ, ಪಕ್ಷಿಗಳು ಹನಿ ನೀರಿಗಾಗಿ ಅಲೆದಾಡಿ ಸಾಯುತ್ತಿವೆ. ಸಾಧ್ಯವಾದಷ್ಟು ಎಲ್ಲರೂ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.
ಎಲ್ಲರೂ ಪಕ್ಷಿಗಳಿಗಾಗಿ ಮನೆ ಮುಂದೆ ಧವಸಧಾನ್ಯಗಳನ್ನು ಇಡಿ. ಇವತ್ತು ಪಕ್ಷಿಗಳಿಗೆ ನೀರು ಸಿಗೋದೆ ಕಷ್ಟ ಆಗಿದೆ. ಹಾಗಾಗಿ ನೀರು ಕೂಡ ಇಡಿ, ತಟ್ಟೆಯಲ್ಲಿ ಒಂದು ಇಂಚಿನಷ್ಟು ನೀರು ಇಡೀ ಪಕ್ಷಿಗಳು ನಿಂತು ನೀರು ಕುಡಿದು, ಪಕ್ಷಿಗಳು ರೆಕ್ಕೆ ಬಡಿದು ಸ್ನಾನ ಮಾಡುತ್ತವೆ. ಅವು ಬಂದು ಹೋಗುವುದನ್ನು ನೋಡುವುದೇ ಚೆಂದ. ” ಪಕ್ಷಿಗಳ ರಕ್ಷಣೆಗಾಗಿ ಕೈಜೋಡಿಸಿ” ಎಂದು ಜನರಲ್ಲಿ ಪ್ರಾಣ ಸ್ನೇಹಿತರ ಬಳಗದಿಂದ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅವಿನಾಶ್ ಬಗಲಿ, ಶಿವು ಬಡಿಗೇರ್, ಸುಧೀರ್ ಕರ್ಕಟ್ಟಿ, ಶ್ರೀಧರ ಕ್ಷತ್ರ, ಸಂಕೇತ ಜೋಶಿ, ಸಚಿನ ಕಳಗೇರಿ, ಪರಶುರಾಮ ಚೋಪಡೆ, ಮಹದೇವ್ ಹದಗಲ, ನಾಗರಾಜ ದಶವಂತ, ಶಿವಕುಮಾರ್ ಬಿಸಾನಳ ಇದ್ದರು.