ಇಂಡಿ : ಕನ್ನಡ ನಾಡು ನುಡಿ ಮೇಲೆ ನಡೆಯುತ್ತಿದ್ದ ದಬ್ಟಾಳೆಕೆಗಳಿಗೆ ತಕ್ಕ ಉತ್ತರ ನೀಡುವುದರೊಂದಿಗೆ
ಕನ್ನಡವನ್ನು ರಕ್ಷಣೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಹೇಳಿದರು.
ಗುರುವಾರ ಪಟ್ಟಣದ ಶಂಕರ್ ಪಾರ್ವತಿ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯಕರ್ತರ ಸಭೆ ಹಾಗೂ ಪದಾಧಿಕಾರಿಗಳು ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಕರ್ನಾಟಕ ಎಂದ ಮೇಲೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳುವುದರೊಂದಿಗೆ ನೆಲ ಜಲ ಭಾಷೆ ರಕ್ಷಣೆ ಮಾಡಬೇಕು. ಕನ್ನಡವೇ ಧರ್ಮ, ಕನ್ನಡವೇ ಜಾತಿ, ಕನ್ನಡವೇ ದೇವರು ಎಂದು ಭಾವಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಗೌರವದೊಂದಿಗೆ ಮುನ್ನಡೆದಿದೆ ಎಂದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವಹಿಸಿರುವ ಡಾ. ಸ್ವರೂಪಾನಂದ ಸ್ವಾಮಿಜಿ ಆಶೀರ್ವದಿಸಿ ಮಾತಾನಾಡಿದರು.
ಇಂದಿನ ದಿನಮಾನದಲ್ಲಿ ಕೆಲವೆಡೆ ಪ್ರಜ್ಞಾವಂತ ಪಾಲಕರೇ ಕನ್ನಡ ಭಾಷೆಯನ್ನು ಪರಕೀಯರ ಭಾಷೆಯಂಬಂತೆ
ಕಾಣುತ್ತಿರುವದು ವಿಷಾದಕರ ಸಂಗತಿಯಾಗಿದೆ. ಮಕ್ಕಳಲ್ಲಿ ತುಂಬುತ್ತಿರುವ ಇಂಗ್ಲಿಷ್ ವ್ಯಾಮೋಹ ಅತಿ
ಕೆಟ್ಟ ಸಂಸ್ಕೃತಿಯನ್ನು ಕಲಿಸುತ್ತಿದೆ. ಅನ್ಯಭಾಷೆ ಕಡೆಗಣಿಸಿ ದ್ವೇಷಿಸುವ ಅಗತ್ಯ ನಮಗಿಲ್ಲ. ಕನ್ನಡ ಭಾಷೆ ಮಾತನಾಡಲು ಬರೆಯಲು ಅನುಕೂಲವಾದಂತಹ ಭಾಷೆಯಾಗಿದೆ. ಕನ್ನಡ ಭಾಷೆ ಉಳಿವಿಗಾಗಿ ಬೆಳವಣಿಗೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಗಲಿರುಳು ದುಡಿಯುತ್ತಾ ಸಾಗಿದ್ದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಇಂಡಿ ತಾಲೂಕು ಕರವೇ ಅಧ್ಯಕ್ಷ ಶಿವು ಮಲಕಗೊಂಡ ವಹಿಸಿದ್ದರು. ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ, ಜಿಲ್ಲಾ ಗೌರವ ಅಧ್ಯಕ್ಷ ಬಸವರಾಜ ಮಾರಲಭಾವಿ, ಆಲಮೇಲ ತಾಲೂಕು ಅಧ್ಯಕ್ಷ ಅಶೋಕ ಭೂಸನೂರ, ಸಿಂದಗಿ ತಾಲೂಕು ಅಧ್ಯಕ್ಷ ಸದ್ದಾಂ ಆಲಗೊರೆ, ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಸುನೀಲ ಮಾಗಿ, ಚಡಚಣ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಬಿರಾದಾರ, ಗೌರವ ಅಧ್ಯಕ್ಷ ಮಹಾದೇವ ರಾಮಗೊಂಡ, ಇಂಡಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಫಯಾಜ್ ಅಹ್ಮದ ಬಾಗವಾನ, ಶಿವು ಬಗಲಿ, ಆನಂದ ಪವಾರ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಬಸವರಾಜ ಮಡಗೊಂಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.