ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ ಜರುಗಿತು. ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಶಾಲಾ ಮುಖ್ಯ ಶಿಕ್ಷಕರಾದ ಸುರೇಶಗೌಡ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ನಾಯಕತ್ವ ಗುಣ ಅತೀ ಅವಶ್ಯಕ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ವಿಶಿಷ್ಠವಾಗಿ ಬದುಕಲು ಉತ್ತಮ ನಾಯಕತ್ವ ಅನಿವಾರ್ಯ ಎಂದರು. ಮುಖ್ಯ ಅತಿಥಿಗಳಾಗಿ ಸಂತೋಷ ಬಂಡೆ ಮಾತನಾಡಿ, ಶಾಲೆಯಲ್ಲಿ ಕಲಿಯುವ ಎಲ್ಲಾ ವಿಷಯಗಳು ಹಾಗೂ ಮೌಲ್ಯಗಳು ಮುಂದಿನ ಅವರ ಜೀವನಕ್ಕೆ ತರಬೇತಿಯಾಗಲಿದೆ. ಅಲ್ಲದೇ, ಸಮಗ್ರ ಭಾರತ ದೇಶವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳ ನಾಯಕತ್ವ ಗುಣಗಳ ಪಾತ್ರ ಗುರುತರವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶಂಕರ ಹುಣಶ್ಯಾಳ ಅವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಮಾತನಾಡಿ,ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಷ್ಟೆಯಲ್ಲದೇ, ಇಂತಹ ಮೌಲ್ಯಯುತ ಗುಣವನ್ನು ಮುಂದಿನ ಭವಿಷ್ಯತ್ತಿಗಾಗಿ ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ಶಾಲಾ ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ,ಲಕ್ಷ್ಮಿ ಮಸೂತಿ, ಸ್ನೇಹ ಹಕ್ಕಿ, ಬಸಮ್ಮ ವಡಗೇರಿ, ಜಯಶ್ರೀ ಬಂಗಾರಿ, ಸವಿತಾ ವಾಲೀಕಾರ,ಅಂಬಿಕಾ ಶಿರಕನಹಳ್ಳಿ, ಚಂದು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.