ವಿಜಯಪುರ: ಆಧುನಿಕತೆಯ ಈ ತಂತ್ರಜ್ಞಾನದ ಯುಗದಲ್ಲಿ ಯುವಕರು ಮೊಬೈಲ್‌ಗಳ ದಾಸರಾಗುತ್ತಿದ್ದಾರೆ. ತಂದೆ-ತಾಯಿಗಳಿಗೆ, ಹಿರಿಯರಿಗೆ ಗೌರವ ನೀಡುತ್ತಿಲ್ಲ. ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ರವಿವಾರ ಸಂಜೆ ನಗರದಲ್ಲಿ ಜರುಗಿದ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ನ 3 ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಯುವರತ್ನ ಮತ್ತು ಜಿಲ್ಲಾ ಮಟ್ಟದ ಸದ್ಭೂಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಯುವಕರ ದೇಶವಾಗಿ ಬೆಳೆಯುತ್ತಿದೆ. ಯುವಕರು ಭಾರತದ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಂಡು ಬದುಕು ಸಮೃದ್ಧಗೊಳಿಸಿಕೊಳ್ಳಬೇಕು. ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಯುವಜನತೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಹುಲಜಂತಿ ಮೂಲಪೀಠದ ಪ.ಪೂ ಮಾಳಿಂಗರಾಯ ಮಹಾರಾಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ,ದೇಶ, ಧರ್ಮ ಮರೆತ ಯುವಕರಲ್ಲಿ ಸ್ವಾಭಿಮಾನ ಇಲ್ಲದಂತಾಗಿದೆ. ಆತ್ಮಬಲ ಗಟ್ಟಿಯಾಗಿ ಭಕ್ತಿ ಶುದ್ಧಿಯಿಂದಾಗಿ ಶಿಕ್ಷಕರು ಬೋಧಿಸುವ ಪಾಠ ಗಟ್ಟಿಗೊಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನವದೆಹಲಿಯ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ನಿರ್ದೇಶಕರಾದ ಭೀಮಸೇನ ಕೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖ್ಯಾತ ಮಧುಮೇಹ ತಜ್ಞರಾದ ಡಾ.ಬಾಬುರಾಜೇಂದ್ರ ನಾಯಕ ಅವರು ವಿವಿಧ ರಂಗಗಳಲ್ಲಿ ವಿಶೇಷ ಸಾಧನೆಗೈದ ಅಮಗೊಂಡ ನಿರ್ವಾಣಿ, ಡಾ.ಕಿರಣ ಓಸ್ವಾಲ್, ಸುಶಿಲೇಂದ್ರ ನಾಯಕ, ಎ ಎಚ್ ಕೊಳಮಲಿ, ಸಂತೋಷ ಬಂಡೆ, ಡಾ ಪ್ರಕಾಶ ಇನಾಮದಾರ, ಮಹಾದೇವಿ ಪಾಟೀಲ ಸೇರಿದಂತೆ ಅನೇಕರಿಗೆ ಪ್ರಶಸ್ತಿ ನೀಡಿ ಸತ್ಕರಿಸಿದರು. ಕರ್ನಾಟಕದ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಪಕಡ್ಡಿ ಉಪಸ್ಥಿತರಿದ್ದರು.
ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಾಹಿತಿ ಆರ್ ಎಸ್ ಪಟ್ಟಣಶೆಟ್ಟಿ, ಶಿವಾಜಿ ಮೊರೆ, ಭೀರು ಗಾಡವೆ, ಶರಣು ಬಸ್ತಾಳ, ಉಮೇಶ ದೊಡಮನಿ, ಯಮನೂರಪ್ಪ ಅರಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.