ಇಂಡಿ: ವಿಶ್ವ ಪರಿಸರ ದಿನವು ಜಗತ್ತನ್ನು ಬಲಪಡಿಸಲು ಮತ್ತು ಎಲ್ಲಾ ವೆಚ್ಚದಲ್ಲಿ ಪ್ರಕೃತಿಯನ್ನು ಸಂರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ನಮಗೆ ನೆನಪಿಸುತ್ತದೆ. ಇದು ನಮ್ಮ ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುವ ಕಾರಣಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ ಹೇಳಿದರು.
ಅವರು ಇಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,ಕೆಜಿಎಸ್,ಯುಬಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಸಸಿ ನೆಟ್ಟು ಮಾತನಾಡಿದರು.
ಇಂಗಾಲದ ಹೆಜ್ಜೆಗುರುತು, ತ್ಯಾಜ್ಯ ವಿಲೇವಾರಿ ಮತ್ತು ಅರಣ್ಯನಾಶ ಮುಂತಾದ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಮತ್ತು ಪರಿಸರ ಬೆಳವಣಿಗೆಗೆ ಅನುಕೂಲಕರವಾದ ಹೊಸ ವಿಧಾನಗಳಿಗೆ ಜನರು ಬದ್ಧರಾಗಬೇಕಾಗಿದೆ ಎಂದರು.
ಕೆಬಿಎಸ್ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಲ್ಲದ ಸುಂದರ ಜಗತ್ತನ್ನು ಸೃಷ್ಟಿಸುವುದು ವಿಶ್ವ ಪರಿಸರ ದಿನದ ಹಿಂದಿನ ಉದ್ದೇಶವಾಗಿದೆ. ಪ್ಲಾಸ್ಟಿಕ್ ಅನ್ನು ನಿಷೇಧಿಸುವುದು, ಹೆಚ್ಚು ಮರಗಳು ಮತ್ತು ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು ತುಂಬಾ ಮುಖ್ಯ ಎಂದು ಹೇಳಿದರು.
ಯುಬಿಎಸ್ ಶಾಲೆಯ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ
ಮಾತನಾಡಿ, ನಾವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಮತ್ತು ಎಚ್ಚರಿಕೆಯಿಂದ ಬಳಸಬೇಕು. ಒಟ್ಟಿಗೆ ನಿಂತರೆ ನಾವು ಸುಂದರ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೆಕಾರ ಮಾತನಾಡಿದರು. ಜೆ ಎಂ ಪತಂಗಿ, ಸಾವಿತ್ರಿ ಸಂಗಮದ, ಸುರೇಶ ದೊಡ್ಯಾಳಕರ, ಎಸ್ ಎಂ ಪಂಚಮುಖಿ, ವಿ ವೈ ಪತ್ತಾರ, ಎಸ್ ಡಿ ಬಿರಾದಾರ, ಎಸ್ ಬಿ ಕುಲಕರ್ಣಿ, ಎಂ ಎಂ ಪತ್ತಾರ, ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಎಸ್ ಎಚ್ ಮೈದರಗಿ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.