ಇಂಡಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಮುಗಿದು ಒಂದು ವರ್ಷ ವಾಗುತ್ತ ಬಂದರೂ ಎರಡನೆಯ ಅವದಿಗೆ ಇನ್ನು ಮೀಸಲಾತಿ ನಿಗದಿ ಆಗಿಲ್ಲ. ಕೂಡಲೇ ಮೀಸಲಾತಿ ನಿಗದಿಪಡಿಸಬೇಕೆಂದು ಆಗ್ರಹಿಸಿ ಇಂದು ಎಲ್ಲ ಸದಸ್ಯರು ತಹಸೀಲ್ದಾರ ಮಂಜುಳಾ ನಾಯಕ ಇವರಿಗೆ ಮನವಿ ಅರ್ಪಿಸಿದರು.
ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ ಪುರಸಭೆ ಮೊದಲ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಅವಧಿ ಮುಗಿದು ೨೮-೦೪- ೨೦೨೩ ಕ್ಕೆ ಒಂದು ವರ್ಷ ಎರಡು ತಿಂಗಳಾಯಿತು. ಎರಡನೆಯ ಅವದಿಗೆ ಮೀಸಲಾತಿ ಸರಕಾರ ಇನ್ನೂ ನಿಗದಿ ಪಡಿಸಿಲ್ಲ. ಕೂಡಲೇ ಸರಕಾರ ನಿಗದಿ ಪಡಿಸಿ ಮೀಸಲಾತಿ ಅನ್ವಯ ಅಧ್ಯಕ್ಷ ಉಪಾಧ್ಯಕ್ಷರಿಗೆ ಸೇವೆ ಮಾಡಲು ಅವಕಾಶ ನೀಡಬೇಕು ಎಂದರು.
ಪುರಸಭೆ ಸದಸ್ಯ ದೇವೆಂದ್ರ ಕುಂಬಾರ ಮಾತನಾಡಿ ಪುರಸಭೆಗೆ ೨೦೧೯ ರಲ್ಲಿ ಚುನಾವಣೆ ನಡೆದು ನಂತರ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ೧ ವರ್ಷ ೦೬ ತಿಂಗಳ ನಂತರ ನಿಗದಿಪಡಿಸಿದ್ದರ ಪ್ರಕಾರ ಮೊದಲ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾಗಿದ್ದು ಈಗ ಮೀಸಲಾತಿ ಅನ್ವಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಬೇಕಾಗಿದೆ. ಕಾರಣ ಎರಡನೆಯ ಅವಧಿಗೆ ಮೀಸಲಾತಿ ಬೇಗನೆ ಪ್ರಕಟಿಸಬೇಕೆಂದು ಕೇಳಿಕೊಂಡರು.
ಸದಸ್ಯರಾದ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಅಯೂಬ ಬಾಗವಾನ, ಅಸ್ಲಂ ಕಡಣಿ,ಶಬ್ಬೀರ ಖಾಜಿ, ಮುಸ್ತಾಕ ಅಹಮ್ಮದ ಇಂಡಿಕರ, ಇಸ್ಮಾಯಿಲ್ ಅರಬ, ಜಹಾಂಗೀರ ಸೌದಾಗರ,ಲಿಂಬಾಜಿ ರಾಠೋಡ,ಉಮೇಶ ದೇಗಿನಾಳ,ಸಾಯಬಣ್ಣ ಮೂರಮನ ಮತ್ತಿತರಿದ್ದರು.