ಇಂಡಿ: ಮನೆಯ ಸುತ್ತಮುತ್ತಲೂ ಮಳೆ ನೀರಿನಲ್ಲಿ ಹಾಗೂ ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಹರಡುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ,ಚಿಕೂನ್ ಗುನ್ಯಾ,ಮಲೇರಿಯಾ ಹರಡದಂತೆ ಮುಂಜಾಗೃತಾ ಕ್ರಮವಾಗಿ ಲಾರ್ವಾ ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸಬೇಕೆಂದು ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಪಟ್ಟಣದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಡಿ ವತಿಯಿಂದ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಡೆಂಗ್ಯೂ ರೋಗದ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು. ನೀರಿನಲ್ಲಿ ಹುಟ್ಟುವ ಡೆಂಗ್ಯೂ ಜ್ವರದ ಸೊಳ್ಳೆಗಳು ತುಂಬಾ ಹಾನಿಕಾರಕವಾಗಿದ್ದು,ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಈ ರೋಗಗಳಿಂದ ದೂರ ಇರಲು ಸಾಧ್ಯ ಎಂದರು. ಸಮೀಕ್ಷೆ ನಿಮಿತ್ಯ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಪಟ್ಟಣದ ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ, ಮನೆಯ ಸುತ್ತಲಿನ ನೀರಿನ ಸಂಗ್ರಹವಾದ ಸ್ಥಳಗಳನ್ನು ಗಮನಿಸಿ, ನೀರಿನಲ್ಲಿ ಲಾರ್ವಾ ಇರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ, ಲಾರ್ವಾ ಸಮೀಕ್ಷೆ ಕೈಗೊಂಡು ಸಲಹೆಗಳನ್ನು ನೀಡುವರು. ಲಾರ್ವಾ ಕಂಡು ಬಂದಲ್ಲಿ ನೀರಿಗೆ ಲಾರ್ವಾ ನಾಶಕ ದ್ರವ್ಯ ಹಾಕಲಾಗುವುದು. ಆರೋಗ್ಯ ಇಲಾಖೆಯ ಈ ಕಾಳಜಿಯ ಜೊತೆಗೆ ಸಾರ್ವಜನಿಕರು ಸಹಕಾರದಿಂದ ಕೈಜೋಡಿಸಿದಾಗ ಮಾತ್ರ ಡೆಂಗ್ಯು ಜ್ವರ ಬಾರದಂತೆ ತಡೆಗಟ್ಟಲು ಸಾಧ್ಯ ಎಂದರು.
ಸಾರ್ವಜನಿಕರು ಸೊಳ್ಳೆ ಪರದಿ ಬಳಸಬೇಕು. ಹೊರಾಂಗಣದಲ್ಲಿ ಇರುವ ಟೆಂಗಿನ ಚಿಪ್ಪು, ಒಡೆದ ಬಾಟಲ್ಗಳು, ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ಸಂಗ್ರಹ ಆಗದ ಹಾಗೆ ನೋಡಿಕೊಳ್ಳಬೇಕು.ಒಂದು ವೇಳೆ ಪದೇ ಪದೇ ಜ್ವರ ಬಂದರೆ ತಕ್ಷಣ ರಕ್ತಪರೀಕ್ಷೆ ಮಾಡಿಸಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರ ಹತ್ತಿರ ತೋರಿಸಿಕೊಳ್ಳಬೇಕು ಎಂದು ಅಬೀದ್ ಗದ್ಯಾಳ ಅವರು ಜನರಲ್ಲಿ ಮನವಿ ಮಾಡಿಕೊಂಡರು. ತಾಲೂಕ ಆರೋಗ್ಯಧಿಕಾರಿ ಅರ್ಚನಾ ಕುಲಕರ್ಣಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು, ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.