ಇಂಡಿ ಪಟ್ಟಣದ ಶಾಂತೇಶ್ವರ ಜಾತ್ರೆಯು ಡಿ.5 ರಿಂದ 7ರವರೆಗೆ ನೆರವೇರಲಿದೆ ಎಂದು ಶಾಂತೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಕಾಸೂಗೌಡ ಬಿರಾದಾರ ತಿಳಿಸಿದ್ದಾರೆ.
5ರಂದು ಮಧ್ಯಾಹ್ನ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.ಈ ವಿವಾಹಕ್ಕೆ ಪಾರ್ವತಿ ಮಹಾದೇವಪ್ಪ ಬಿರಾದಾರ ಅವರಿಂದ ಭೋಜನದ ವ್ಯವಸ್ಥೆಯಿದೆ. ರಾತ್ರಿ 9ಕ್ಕೆ ಮಹಾದೇವಿ ದೇವರ ಹಂದಿಗೊಂಡ ಮತ್ತು ಚಂದ್ರಕಾಂತ ನಾಟೀಕಾರ ಬಾಳಿಗೇರಿ ಅವರಿಂದ ಹಾಡುಗಳು ಜರುಗಲಿವೆ.
ಡಿ.6 ರಂದು ಬೆಳಿಗ್ಗೆ 4ಕ್ಕೆ ಸಂತೋಷ ಸಾರ್ವಭೌಮ ಬಗಲಿ ಅವರಿಂದ ದೇವಸ್ಥಾನದಲ್ಲಿ ಅಕ್ಕಿಪೂಜೆ, ಗುಡಿಗೆ ಬಾಸಿಂಗ, ನಂದಿಕೋಲು ಪ್ರದಕ್ಷಿಣೆ, ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರ ವರೆಗೆ ಗೀಗೀ ಪದಗಳು ನಡೆಯಲಿವೆ ಎಂದು ತಿಳಿಸಿದರು.
ಡಿ.7 ರಂದು ಬೆಳಿಗ್ಗೆ 4ಕ್ಕೆ ದೇವಸ್ಥಾನದಲ್ಲಿದೆ.ದಾದಾಗೌಡ ಬಾಬಾಗೌಡ ಪಾಟೀಲ ಅವರ ಮನೆತನದಿಂದ ಅಕ್ಕಿಪೂಜೆ ನಡೆಯುವುದು.ಬೆಳಿಗ್ಗೆ 6ಕ್ಕೆ ಕಳ್ಳಿಮಠದಲ್ಲಿ ತಂಗಿರುವ ನಂದಿಕೋಲು, ಬಾಸಿಂಗ್, ಪುರವಂತರು, ದೇವರ ಪಲ್ಲಕಿಯನ್ನು ಬೆಳ್ತಂಗಡಿಯ ರಾಜು ಕುಂದರಗಿ ಅವರ ಕೀಲು ಗೊಂಬೆ ಕುಣಿತ, ಸಕಲ ವಾಧ್ಯವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಂತೇಶ್ವರ ದೇವಸ್ಥಾನದ ಮುಖ್ಯದ್ವಾರಕ್ಕೆ ಬರುವುದು. ಅಂದು ಮಧ್ಯಾಹ್ನ 3ಕ್ಕೆ ಪುರಸಭೆಯ ಸಹಯೋಗದಲ್ಲಿ ಜಂಗೀ ನಿಕಾಲಿ ಕುಸ್ತಿಗಳು ಜರುಗಲಿವೆ.ರಾತ್ರಿ 7 ಗಂಟೆಗೆ ದೇವರ ಪಲ್ಲಕ್ಕಿವಾಧ್ಯ ಪೀರಮಂಜಲೆಖಾನಗೆ ಗಂಧ ಅರ್ಪಿಸಿ ನಂತರ ಹಳ್ಳದ ಪಾದಗಟ್ಟೆಗೆ ತಲುಪಿ, ಅಲ್ಲಿ ಪೂಜೆ ಸಲ್ಲಿಸಿದ ನಂತರ ಇಂಡಿ ಪಟ್ಟಣದ ಪೊಲೀಸ್ ಪರೇಡ ಮೈದಾನಕ್ಕೆ ಬಂದು ತಲುಪುವುದು. ಅಲ್ಲಿ ಮದ್ದು ಸುಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.