ರಾಜ್ಯ ಜಲಸಂಪನ್ಮೂಲ ಇಲಾಖೆಯ ಬ್ಯಾಕ್‌ಲಾಗ್ ಎಸ್. ಡಿ.ಎ ನೇಮಕಾತಿಯಲ್ಲಿನ ಗೊಂದಲಗಳನ್ನು ಪರಿಹರಿಸಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನೇಮಕಕ್ಕೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟ ಅಧ್ಯಕ್ಷ ಲಾಯಪ್ಪ ಇಂಗಳೆ ಮಾತನಾಡಿ, ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಬ್ಯಾಕ್ ಲಾಗ್ ಹುದ್ದೆಗಳನ್ನು ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು.ರಾಜ್ಯದ ಸಾವಿರಾರು ಜನ ವಯೋಮಿತಿ ಮಿರುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.ಸದ್ಯ ಈಗ ಇಲಾಖೆಯು ಮೂಲ ದಾಖಲಾತಿಗಳ ಪರಿಶೀಲನಾ ಪಟ್ಟಿ ಬಿಡುಗಡೆ ಮಾಡಿದ್ದು ಸದರಿ ಈ ಪಟ್ಟಿಯು ಅಭ್ಯರ್ಥಿಗಳಾದ ನಮ್ಮಲ್ಲಿ ಅನುಮಾನ ಹಾಗೂ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.ಸದರಿ ನೇಮಕಾತಿಯು ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ಮೀಸಲಾಗಿದ್ದು ನೇಮಕಾತಿ ವಿಭಾಗವು ಅಭ್ಯರ್ಥಿಗಳ ವಯೋಮಿತಿಯನ್ನು ಗಣನೆಗೆ ತೆಗೆದುಕೊಂಡು ಪಟ್ಟಿಯನ್ನು ಬಿಡುಗಡೆಮಾಡಬೇಕಾಗಿತ್ತು. ಆದರೆ ಈಗ ಬಿಡುಗಡೆಮಾಡಿರುವ ಪಟ್ಟಿಯು ಅಭ್ಯರ್ಥಿಗಳ ವಯೋಮಿತಿಯನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಸದರಿ ನೇಮಕಾತಿಯ ನಿಯಮವನ್ನು ಉಲ್ಲಂಘನೆಯಾಗಿರುತ್ತದೆ.ಗರಿಷ್ಠ ವಯೋಮಿತಿಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡ ಶಿವರಾಜ ಹಜೇನವರ ಮಾತನಾಡಿ, ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯಲ್ಲಿ ಹಲವು ಗೊಂದಲಗಳಿದ್ದರು ಜಲ ಸಂಪನ್ಮೂಲ ಇಲಾಖೆಯ ನೇಮಕಾತಿ ವಿಭಾಗವು ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸದೆ ತರಾತುರಿಯಲ್ಲಿ ದಾಖಲಾತಿಗಳ ಪಟ್ಟಿ ಬಿಡುಗಡೆ ಗೊಳಿಸಿದ್ದು ಅನುಮಾನ ಉಂಟುಮಾಡುತ್ತಿದೆ. ಇದರಿಂದ ನಿಜವಾದ ಅಭ್ಯರ್ಥಿಗಳಲ್ಲಿ ಸರ್ಕಾರದ ತಂತ್ರಜ್ಞಾನ ಹಾಗೂ ಆಡಳಿತ ವ್ಯವಸ್ಥೆಯ ವೈಫಲ್ಯ ಎದ್ದುಕಾಣುತ್ತಿದೆ.
ಕೂಡಲೇ ಸರ್ಕಾರ ಸದ್ಯ ಬಿಡುಗಡೆ ಮಾಡಿರುವ ಅನುಮಾನಾಸ್ಪದ ಮೂಲ ದಾಖಲಾತಿಗಳ ಪರಿಶೀಲನಾ ಪಟ್ಟಿಯನ್ನು ತಡೆಹಿಡಿಯಬೇಕು.ದಿನಾಂಕ: 14-12-2022 ಮತ್ತು 15-12-2022 ರಂದು ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಕರೆದಿರುವ ಸದರಿ ಪಟ್ಟಿಯನ್ನು ತಡೆ ಹಿಡಿದು ಈಗಾಗಲೇ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲಿಸಿ ವಯೋಮಿತಿ ಆಧಾರದಲ್ಲಿ ಹೊಸ ಪಟ್ಟಿಯನ್ನು ಪಾರದರ್ಶಕವಾಗಿ ಪರಿಶೀಲನಾ ಪಟ್ಟಿಯನ್ನು ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕಲ್ಲಪ್ಪ ಶಿವಶರಣ, ಲಕ್ಷಣ ಇಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.