ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ವಿಶೇಷ ಬೋಧನಾ ವ್ಯವಸ್ಥೆ-ಪರಿಹಾರ ವರ್ಗಗಳನ್ನು ನಡೆಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕಾಗಿ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು, ವಿವಿಧ ಇಲಾಖೆಗಳ ವ್ಯಾಪ್ತಿಯ ಸರ್ಕಾರಿ ವಸತಿ ಶಾಲೆಗಳ ಮುಖ್ಯಸ್ಥರು, ಕ್ಷೇತ್ರ-ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕದ್ವಯರು ಮತ್ತು ಶಿಕ್ಷಣ ಇಲಾಖೆಯ ವಿವಿಧ ವೃಂದದ ಶಾಲಾ ಮೇಲುಸ್ತುವಾರಿ ಮತ್ತು ಮಾರ್ಗದರ್ಶಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕ್ರೋಢೀಕೃತ ಮಾಹಿತಿಯನ್ನು ಸ್ಪೆಡ್ ಶೀಟ್ ಮೂಲಕ ನಿರ್ವಹಿಸಿ, ಅವರ ಕಲಿಕಾ ಪ್ರಗತಿಯ ಮೇಲೆ ನಿರಂತರವಾಗಿ ನಿಗಾವಹಿಸಬೇಕು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸೇರಿದಂತೆ ಶಿಕ್ಷಕ ವೃಂದಕ್ಕೆ ಅಂತಹ ಮಕ್ಕಳನ್ನು ದತ್ತು ನೀಡಲು ಕ್ರಮ ವಹಿಸಬೇಕು.ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ನಡೆಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಯ ಮೇಲೆ ಖುದ್ದು ನಿಗಾವಹಿಸಬೇಕು. ಕಾಲಕಾಲಕ್ಕೆ ಸಂಬಂಧಿಸಿದ ವಿಷಯ ಶಿಕ್ಷಕರೊಡನೆ ಮತ್ತು ಅಂತಹ ಮಕ್ಕಳ ಪಾಲಕರೊಡನೆ ವಿಶೇಷ ಸಭೆಗಳನ್ನು ನಡೆಸಿ ಎಲ್ಲ ಮಕ್ಕಳೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ನಿಯಮಿತ ಪಾಠ ಬೋಧನೆ, ವ್ಯಾಪಕ ಮೌಲ್ಯಮಾಪನ ಹಾಗೂ ಶಾಲೆಯ ಸಮಗ್ರ ಶೈಕ್ಷಣಿಕ ವಾತಾವರಣದ ವಸ್ತುನಿಷ್ಠ ವಿಶ್ಲೇಷಣೆಯಂತಹ ವಿಷಯಗಳಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತೋರುವ ವ್ಯಕ್ತಿಗತ ಬದ್ಧತೆ, ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ವೃತ್ತಿಪರ ಧನಾತ್ಮಕ ವರ್ತನೆಗಳು ಆಯಾ ಶಾಲೆಯ ಸಮಸ್ತ ವಿದ್ಯಾರ್ಥಿ ಸಮೂಹ ಸವಾರ್ಂಗೀಣ ವಿಕಾಸ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಮಕ್ಕಳ ನಿಯಮಿತ ಹಾಜರಾತಿ, ಕಲಿಕೆಯ ವಿಧಾನ ಮತ್ತು ಮಟ್ಟ, ಗ್ರಹಿಕಾ ಸಾಮಥ್ಯ ಹಾಗೂ ಗ್ರಾಮೀಣ ಪರಿಸರದಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಯ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರುವ ಹಲವಾರು ವಾಸ್ತವಿಕ ಅಂಶಗಳ ಕುರಿತು ಆಳವಾಗಿ ಚಿಂತನೆ ನಡೆಸಿ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸರ್ವಸನ್ನದ್ಧರನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಸೂಕ್ತಸ್ಥಳದ ಅಭಾವ ಎದುರಿಸುತ್ತಿರುವ ಗ್ರಾಮೀಣ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಲು ಪುನರುಜ್ಜಿವನಗೊಂಡು ಜಿಲ್ಲೆಯಾದ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ 194 ಗಾಮೀಣ ಭಾಗದ ಗ್ರಂಥಾಲಯ, ಗ್ರಾಮ ಪಂಚಾಯತ ಕಟ್ಟಡಗಳು ಹಾಗೂ ಶಾಲೆಯ ಕಟ್ಟಡಗಳನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳಲು ಕ್ರಮ ವಹಿಸಬೇಕು. ಈ ಕುರಿತು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಈಗಾಗಲೇ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ಇಲಾಖೆಗಳ ವಸತಿ ನಿಲಯಗಳ ಮಕ್ಕಳಿಗಾಗಿ ಪ್ರತಿನಿತ್ಯ ಸಂಜೆ 6 ರಿಂದ 8-30 ರ ವರೆಗೆ ವಿಶೇಷವಾಗಿ ಹಮ್ಮಿಕೊಂಡಿರುವ “ಮಿಶನ್ ವಿದ್ಯಾಪುರ” ಆನ್ ಲೈನ್ ಪಾಠ ಬೋಧನೆಯ ಉಪಕ್ರಮದ ಲಾಭವನ್ನುಅರ್ಹ ಮಕ್ಕಳಿಗೆ ತಲುಪಿಸುವ ನಿಟ್ಟಿನಲಿ ಸಂಬಂಧಿಸಿದ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು ಮತ್ತು ವಸತಿನಿಲಯ ಪಾಲಕರೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಕಾಲ ಕಾಲಕ್ಕೆ ಚರ್ಚಿಸಿ ಅಗತ್ಯಕ್ರಮ ಕೈಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕಳೆದ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಪ್ರತಿಗಳ ಪೂರೈಕೆ, ಮಾದರಿ ಪ್ರಶ್ನೆ ಪತ್ರಿಕೆಗಳ ರಚನೆ, ನಿರಂತರ ಮೌಲ್ಯಮಾಪನ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಆಹ್ಲಾದಕರ ಕಲಿಕಾ ವಾತಾವರಣವನ್ನು ಕಲ್ಪಿಸಿಕೊಟ್ಟು,ಜಿಲ್ಲೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕಾಗಿ “ಪಾಸಿಂಗ್ ಮತ್ತು ಸ್ಕೋರಿಂಗ್” ಪ್ಯಾಕೇಜ್ ಸಿದ್ಧಪಡಿಸುವಲ್ಲಿ ಡೈಟ್ ನಿರ್ಣಾಯಕ ಪಾತ್ರ ನಿರ್ವಹಿಸಿದೆ ಮತ್ತು ಸರಣಿ ಪರೀಕ್ಷೆಯನ್ನೊಳಗೊಂಡಂತೆ ವಿವಿಧರೀತಿಯ ಮೌಲ್ಯಮಾಪನಕ್ಕಾಗಿ ಪರೀಕ್ಷಾ ಮಂಡಳಿಯ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರಚಿಸಿಕೊಟ್ಟು ಉಪನಿರ್ದೇಶಕರು(ಆಡಳಿತ)ರವರೊಡನೆ ಸಂಯೋಜಿತರಾಗಿ ಕಾರ್ಯನಿರ್ವಹಿಸುತ್ತಿರುವದಾಗಿ ಸಭೆಗೆ ಮಾಹಿತಿ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಇವರು ಮಾತನಾಡಿ “ಮಿಶನ್ ವಿದ್ಯಾಪುರ” ಆನ್ ಲೈನ್ ವರ್ಗಗಳ ಉಪಕ್ರಮವು ವಸತಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸುತುಂಬಿದ್ದು ಪ್ರಸಕ್ತ ಸಾಲಿನಲ್ಲಿ ಎಲ್ಲ 22 ವಸತಿಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಉಮೇಶ ಶಿರಹಟ್ಟಿ ಮಾತನಾಡಿದರು.ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಈರಣ್ಣಾ ಆಶಾಪೂರ, ಡಯಟ್ ಹಿರಿಯ ಉಪನ್ಯಾಸಕ ಎಸ್.ಎ.ಮುಜಾವರ, ಎಸ್.ಎಸ್.ಎಲ್.ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಮಂಜುನಾಥ, ಗುಳೇದಗುಡ್ಡ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಾ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.