ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 185 ಕೆಜಿ ತೂಕದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯರು ಮರುಜೀವ ಕೊಟ್ಟಿದ್ದಾರೆ. ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ 48 ವರ್ಷದ ಚಂದ್ರಮ್ಮಎಂಬ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆ ಇತ್ತು. ಅವರ ಹೊಟ್ಟೆಯಲ್ಲಿನ ಕರಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿತ್ತು. ಈ ಸಮಸ್ಯೆ ಸರಿಪಡಿಸಲು ಚಂದ್ರಮರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇತ್ತು. ಆದರೆ, ಅವರು 185 ಕೆಜಿ ತೂಕ ಇದ್ದ ಕಾರಣ ಆಪರೇಷನ್ ಮಾಡಲು ವೈದ್ಯರು ಹಿಂದೇಟು ಹಾಕುತಿದ್ದರು. ಹಲವು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಚಂದ್ರಮ್ಮರಿಗೆ ಆಪರೇಷನ್ ಮಾಡಲು ಮುಂದೆ ಬಂದಿರಲಿಲ್ಲ.ಕೊನೆಗೆ ಹಾವೇರಿ ಜಿಲ್ಲಾಸ್ಪತ್ರೆಯ ಡಾ.ನಿರಂಜನ ನೇತೃತ್ವದ ವೈದ್ಯರು ಹಾಗೂ ಸಿಬ್ಬಂದಿ ತಂಡ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ಚಂದ್ರಮ್ಮರ ಜೀವ ಉಳಿಸಿದ್ದಾರೆ.