ವಿಜಯಪುರ: ತನಗೆ ಐಸಿಸ್ ಉಗ್ರರೊಂದಿಗೆ ನಂಟಿದೆ ಎಂದು ಮಾಡಿರುವ ಆರೋಪವನ್ನು ಸಾಬೀತುಪಡಿಸದಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗುತ್ತಾರಾ ಎಂದು ಬಿಜಾಪುರ ಶರೀಫ್ ನ ಖ್ಯಾತ ಸೂಫಿ ತನ್ವೀರ್ ಪೀರಾ ಎಂದೇ ಖ್ಯಾತಿ ಪಡೆದಿರುವ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಹಾಗುಕರ್ನಾಟಕದ ಜಮಾತ್ ಎ ಅಹಲೆ ಸುನ್ನತ್ ನ ಅಧ್ಯಕ್ಷ ಸೈಯದ್ ತನ್ವೀರ್ ಹಾಶ್ಮಿ ಕೇಳಿದ್ದಾರೆ.
ಹಾಶ್ಮಿಯವರು ಉಗ್ರಗಾಮಿಗಳ ಪರ ಸಹಾನುಭೂತಿ ಹೊಂದಿದ್ದು ಅವರಿಗೆ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕಗಳಿವೆ ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಮುಸ್ಲಿಂ ವಿದ್ವಾಂಸರ ಸಮಾವೇಶದಲ್ಲಿ ಹಾಶ್ಮಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಅದನ್ನು ಉಲ್ಲೇಖಿಸಿ ಸಿದ್ದರಾಮಯ್ಯನವರಿಗೂ ಐಸಿಸ್ ಪರ ಸಹಾನುಭೂತಿ ಹೊಂದಿರುವವರ ಜೊತೆ ಸಂಬಂಧವಿದೆ ಎಂದೂ ಯತ್ನಾಳ್ ದೂರಿದ್ದರು.
ತಮ್ಮ ಇನ್ನೊಂದು ಎಕ್ಸ್ ಪೋಸ್ಟ್ ನೊಂದಿಗೆ ಹಾಶ್ಮಿಯವರ ಅರಬ್ ಭೇಟಿಯ ಕೆಲವು ಭಾವಚಿತ್ರಗಳನ್ನು ಹಂಚಿಕೊಂಡಿದ್ದ ಯತ್ನಾಳ್, “ಹಾಶ್ಮಿ ಉಗ್ರಗಾಮಿ ಪರ ಸಹಾನುಭೂತಿ ಹೊಂದಿರುವವರು ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದಾರೆ” ಎಂದೂ ಆಪಾದಿಸಿದ್ದರು. ಈ ಆರೋಪಗಳನ್ನು ಅಲ್ಲಗಳೆದಿರುವ ಹುಬ್ಬಳಿ ಸಮಾವೇಶದ ಸಂಘಟಕ ಸೈಯದ್ ತಾಜುದ್ದೀನ್ ಖಾದ್ರಿ, “ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ಪೊಲೀಸರಿಗೆ ಸಾಕ್ಷಿ ಒದಗಿಸಿ” ಎಂದು ಸವಾಲು ಹಾಕಿದ್ದಾರೆ. “ಹಾಶ್ಮಿ ಖ್ಯಾತ ಸೂಫಿ ವಿದ್ವಾಂಸರಾಗಿದ್ದು, ಪ್ರಧಾನಿ ಮೋದಿ ಭಾಗವಹಿಸಿದ್ದ 2016ರ ಸೂಫಿ ವಿಶ್ವ ಸಮ್ಮೇಳವನ್ನು ಸಂಘಟಿಸಿದ್ದವರು” ಎಂದು ಹೇಳಿದ್ದಾರೆ.
“ತನ್ವೀರ್ ಹಾಶ್ಮಿ ಕೇವಲ ವಿದ್ವಾಂಸರಲ್ಲ; ಅವರೊಬ್ಬ ಸೂಫಿ ಕೂಡಾ. ಇಂತಹ ಗಣ್ಯರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಸೂಕ್ತವಲ್ಲ. ಅವರು ವಿಶ‍್ವ ಸೂಫಿ ಸಮ್ಮೇಳನವನ್ನು ಆಯೋಜಿಸಿದ್ದ ಸಂಘಟಕರ ಪೈಕಿ ಒಬ್ಬರಾಗಿದ್ದರು. ಆ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಕೂಡಾ ಭಾಗವಹಿಸಿದ್ದರು. ಆಗ ಯತ್ನಾಳ್ ಏಕೆ ಮೌನವಾಗಿದ್ದರು? ಒಂದು ವೇಳೆ ಅವರು ಹೇಳುತ್ತಿರುವುದು ನಿಜವಾಗಿದ್ದರೆ, ಅವರೇಕೆ ಆಗ ಮಾತನಾಡಲಿಲ್ಲ?” ಎಂದು ಬುಧವಾರ ಖಾದ್ರಿ ಸುದ್ದಿಗಾರರನ್ನು ಪ್ರಶ್ನಿಸಿದರು.
“ಇತ್ತೀಚೆಗೆ ಆಯೋಜನೆಗೊಂಡಿದ್ದ ಕನಕ ಜಯಂತಿಯಲ್ಲೂ ಹಾಶ್ಮಿ ಭಾಗವಹಿಸಿದ್ದರು. ಅವರು ಪ್ರತಿಷ್ಠಿತ ಕುಟುಂಬದಿಂದ ಬಂದಿದ್ದು, ವಿಜಯಪುರದಲ್ಲೇ ಜನಿಸಿ, ಹಲವಾರು ಸಾಮಾಜಿಕ ಕಾರ್ಯ ಹಾಗೂ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ವ್ಯಕ್ತಿಯನ್ನು ಆಧಾರರಹಿತ ಆರೋಪಗಳಿಂದ ಅವಮಾನ ಮಾಡುವುದು ಸೂಕ್ತವಲ್ಲ” ಎಂದು ಖಾದ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರ್ತಾಭಾರತಿ ಜೊತೆ ಮಾತಾಡಿದ ಹಾಶ್ಮಿ ಅವರೂ ತನ್ನ ವಿರುದ್ಧದ ಈ ಆರೋಪಗಳನ್ನು ಅಲ್ಲಗಳೆದಿದ್ದು, ಆರೋಪಗಳನ್ನು ಎಂಟು ದಿನಗಳ ಒಳಗಾಗಿ ಸಾಬೀತುಪಡಿಸಬೇಕು ಎಂದು ಯತ್ನಾಳ್ ಗೆ ಸವಾಲು ಹಾಕಿದ್ದಾರೆ. ತನಗೆ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹಾಗೂ ಆರ್ಥಿಕ ವ್ಯವಹಾರಗಳು ಇರುವ ಯತ್ನಾಳ್ ಆರೋಪದ ಬಗ್ಗೆ ಯಾವುದೇ ಬಗೆಯ ತನಿಖೆಯನ್ನು ಎದುರಿಸಲು ನಾನು ಸಿದ್ಧ. ಯತ್ನಾಳ್ ಹಂಚಿಕೊಂಡಿರುವ ಭಾವಚಿತ್ರಗಳು ತಾನು ಇರಾಕ್ ನ ಮಸೀದಿಗೆ ಭೇಟಿ ನೀಡಿದ್ದಾಗಿನದ್ದು. ತಾನು ಯಾವುದೇ ಉಗ್ರಗಾಮಿಗಳನ್ನು ಭೇಟಿಯಾಗಿಲ್ಲ” ಎಂದು ಅವರು ವಿವರಿಸಿದ್ದಾರೆ.
ಸೈಯದ್ ತನ್ವೀರ್ ಹಾಶ್ಮಿ “ನನ್ನ ಸಂಪರ್ಕಗಳು ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ. ನನಗೆ ಬಚ್ಚಿಟ್ಟುಕೊಳ್ಳಬೇಕಾದುದೇನೂ ಇಲ್ಲ. ನನ್ನ ಮೇಲಿನ ಆರೋಪಗಳನ್ನು ಇನ್ನು ಎಂಟು ದಿನಗಳ ಒಳಗಾಗಿ ಸಾಬೀತುಪಡಿಸಬೇಕು . ಒಂದು ವೇಳೆ ಯತ್ನಾಳ್ ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅವರು ಪಾಕಿಸ್ತಾನಕ್ಕೆ ಹೋಗುವರೆ? ನಾನವರಿಗೆ ಸವಾಲು ಹಾಕುತ್ತೇನೆ ” ಎಂದು ಹಾಶ್ಮಿ ಕೇಳಿದ್ದಾರೆ.
“ನಾನು ಎಲ್ಲೆಡೆಯ ಭಯೋತ್ಪಾದಕ ಸಂಘಟನೆಗಳು ಹಾಗೂ ಅವುಗಳ ಚಟುವಟಿಕೆಗಳನ್ನು ವಿರೋಧಿಸುತ್ತಾ ಹಾಗೂ ಖಂಡಿಸುತ್ತಲೇ ಬರುತ್ತಿದ್ದೇನೆ. ಯತ್ನಾಳ್ ಮಾಡುತ್ತಿರುವ ಆರೋಪಗಳು ಆಧಾರ ರಹಿತ ಹಾಗೂ ಅಸಂಬದ್ಧ. ಅವರು ಲಗತ್ತಿಸಿರುವ ಭಾವಚಿತ್ರದಲ್ಲಿ ನಾನು ಉಗ್ರಗಾಮಿಗಳನ್ನು ಭೇಟಿ ಮಾಡಿದ್ದೆ ಎಂದು ಆರೋಪಿಸಿದ್ದಾರೆ. ತಮಾಷೆಯೆಂದರೆ, ಆ ಭಾವಚಿತ್ರಗಳನ್ನು ನನ್ನದೇ ಫೇಸ್ ಬುಕ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ. ಆ ಭಾವಚಿತ್ರಗಳು 2013ರಲ್ಲಿ ಇರಾಕ್ ಗೆ ಭೇಟಿ ನೀಡಿದ್ದಾಗಿನವು. ಆ ಭಾವಚಿತ್ರದಲ್ಲಿರುವುದು ಇರಾಕ್ ಸರ್ಕಾರದ ಅಧಿಕಾರಿಗಳು ಹಾಗೂ ಮಸೀದಿಯ ಮುಖ್ಯ ಮೌಲ್ವಿಗಳೇ ಹೊರತು, ಉಗ್ರಗಾಮಿಗಳಲ್ಲ” ಎಂದು ಹಾಶ್ಮಿ ವಿವರಿಸಿದ್ದಾರೆ.
ತಮ್ಮ ಮುಂದಿನ ಕ್ರಮದ ಕುರಿತು ಪ್ರಶ್ನಿಸಿದಾಗ, ನಮ್ಮ ತಂಡವು ಕಾನೂನು ಕ್ರಮದ ಕುರಿತು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಭಾರಿ ವಿವಾದದ ಬೆನ್ನಿಗೇ, ಹಾಶ್ಮಿಯವರೊಂದಿಗೆ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಇರುವ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಹುಸೈನಿ ಹಾಶ್ಮಿ ಕುಟುಂಬಕ್ಕೆ ಸೇರಿರುವ ತನ್ವೀರ್ ಹಾಶ್ಮಿ, ಭಾರತದಲ್ಲಿನ ಸುನ್ನಿ ಮುಸ್ಲಿಮರ ಹಲವಾರು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಾಯೋಜಕರಾಗಿದ್ದಾರೆ. ಇತ್ತೀಚೆಗೆ ಕರ್ನಾಟಕದ ಜಮಾತ್ ಎ ಅಹಲೆ ಸುನ್ನತ್ ನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಾಶ್ಮಿ, ಮುಸ್ಲಿಂ ಸಂಘಟನೆಗಳ ಒಕ್ಕೂಟ ಮುಸ್ಲಿಂ ಮುತ್ತಹಿದ ಕೌನ್ಸಿಲ್ ನ ಅಧ್ಯಕ್ಷರಾಗಿದ್ದು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರೂ ಆಗಿದ್ದಾರೆ.
“ಯತ್ನಾಳ್ ಜೆಡಿಎಸ್ ಪಕ್ಷದಲ್ಲಿದ್ದಾಗ ನಿಯಮಿತವಾಗಿ ಮಸೀದಿಗೆ ಬಂದು, ನನ್ನನ್ನು ಭೇಟಿ ಮಾಡುತ್ತಿದ್ದರು. ಬಿಜೆಪಿಗೆ ಸೇರ್ಪಡೆಯಾದ ನಂತರ ಅದನ್ನು ನಿಲ್ಲಿಸಿದರು. ಹಲವಾರು ರಾಜಕೀಯ ಹಾಗೂ ಸಾಮಾಜಿಕ ನಾಯಕರು ಆಶೀರ್ವಾದಕ್ಕಾಗಿ ನಮ್ಮ ಮಸೀದಿಗೆ ಭೇಟಿ ನೀಡುತ್ತಾರೆ” ಎಂದು ಹಾಶ್ಮಿ ಸ್ಪಷ್ಟಪಡಿಸಿದ್ದಾರೆ.